ಕರ್ನಾಟಕ ಕಲಾಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಉಡುಪಿಯ ಯುವ ಪ್ರತಿಭೆ ರಾಮಾಂಜಿ ಆಯ್ಕೆ

ಉಡುಪಿ : ಬೆಂಗಳೂರಿನ ಸಿದ್ಧಾರೂಢ ಮಿಷನ್ ಸಂಸ್ಥೆ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ಪ್ರತಿಷ್ಠಿತ “ಕರ್ನಾಟಕ ಕಲಾಭೂಷಣ ” ರಾಷ್ಟ್ರೀಯ ಪ್ರಶಸ್ತಿಗೆ ಉಡುಪಿಯ ಯುವ ಪ್ರತಿಭಾನ್ವಿತ ಕಲಾವಿದ, ನಮ್ಮ ಭೂಮಿಯ ರಾಮಾಂಜಿ ಆಯ್ಕೆಯಾಗಿದ್ದಾರೆ.

ರಾಮಾಂಜಿ ಅವರು ಕಳೆದ 20 ವರ್ಷಗಳಿಂದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಿಸರ, ಶಿಕ್ಷಣ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಡಿ.25ರಂದು ಬೆಂಗಳೂರಿನ ಸಿದ್ಧಾರೂಢ ಮಿಷನ್ ಸಂಸ್ಥೆಯಲ್ಲಿ ವಿಶ್ವ ದರ್ಶನ ದಿನಪತ್ರಿಕೆಯ ದ್ವಿತೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ವಿಶ್ವ ದರ್ಶನ ಕನ್ನಡ ದೈನಿಕ ಪತ್ರಿಕೆಯ ಸಂಪಾದಕ ಡಾ. ಎಸ್.ಎಸ್. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಮಾಂಜಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪತ್ರಿಕೋದ್ಯಮದಲ್ಲಿ ಪೂರೈಸಿದ್ದು, ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯ ಯುವ ಸಂಘಟನೆಗಳ ಒಕ್ಕೂಟದಿಂದ 75 ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ರಂಗಭೂಮಿ ಕ್ಷೇತ್ರದ ಸಾಧನೆಗಾಗಿ `ರಾಜ್ಯ ಯುವ ಪ್ರಶಸ್ತಿ’, ಮಂಗಳೂರಿನ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನ ಕೊಡ ಮಾಡುವ `ವರ್ಷದ ವ್ಯಕ್ತಿ ಗೌರವ -2022 ‘ ಪ್ರಶಸ್ತಿ, ಪ್ರಜಾವಾಣಿಯ ` ಸಾಧಕ ಯುವ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.