ಉಡುಪಿ: ಎಲ್ಲಾ ಯುವಕರಂತೆ ಆತನಿಗೂ ಬದುಕಿನಲ್ಲಿ ನೂರಾರು ಕನಸುಗಳಿತ್ತು. ಅದನ್ನು ಸಕಾರಗೊಳಿಸುವ ಸಲುವಾಗಿ ರಾತ್ರಿ-ಹಗಲಿನ ಪರಿವಿಲ್ಲದೆ ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕೂರದೆ ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಶಾಮಿಯಾನ, ಲೈಟಿಂಗ್ ಹೀಗೆ ಹಲವಾರು ಕೆಲಸಗಳಲ್ಲಿ ಮೈಮುರಿದು ದುಡಿಯುತ್ತಿದ್ದ. ರಜೆ ಎಂದು ಒಂದು ದಿನ ಕೂಡ ಮನೆಯಲ್ಲಿ ಕುಳಿತುಕೊಳ್ಳುವ ಜಾಯಮಾನ ಆತನದ್ದಾಗಿರಲಿಲ್ಲ. ಆದರೆ ಈಗ ವಿಧಿಯಾಟವೇ ಬೇರೆಯಾಗಿದೆ. ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಓಡಾಡುತ್ತಿದ್ದ ಯುವಕನ ಒಂದು ಕಾಲು ಅಪಘಾತದಿಂದಾಗಿ ಕತ್ತರಿಸಲ್ಪಟ್ಟಿದೆ.
ಬದುಕಿನ ಬಗ್ಗೆ ನೂರು ಕನಸುಗಳನ್ನು ಹೊಂದಿದವನು ಮುಂದೇನು ಎನ್ನುವ ಚಿಂತೆಯಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿದ್ದಾನೆ. ಇದು ಕೋಟ ಸಮೀಪದ ಮಧುವನ, ಅಚ್ಲಾಡಿಯ ನಿವಾಸಿ 21ವರ್ಷದ ನಿಶಾಂತ್ ಶೆಟ್ಟಿಯ ಜೀವನದ ದುರಂತ ಕಥೆ.
ಈತ ಅಚ್ಲಾಡಿ ಬೈಲ್ಮನೆ ನಿವಾಸಿ ಸುರೇಶ್ ಶೆಟ್ಟಿ ಹಾಗೂ ಜ್ಯೋತಿ ಎಸ್.ಶೆಟ್ಟಿಯವರ ಏಕೈಕ ಪುತ್ರ.
ಇನ್ನೋರ್ವ ಪುತ್ರಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ತಂದೆ ಬೆಂಗಳೂರಿನ ಹೋಟೆಲ್ವೊಂದರಲ್ಲಿ ಚಿಕ್ಕ ಸಂಬಳಕ್ಕೆ ಕೆಲಸ ಮಾಡುತ್ತಿದ್ದು, ತಾಯಿ ಮನೆಗೆಲಸ ನಿರ್ವಹಿಸಿಕೊಂಡಿದ್ದಾರೆ. ಹೀಗೆ ಈತನ ಕುಟುಂಬ ಆರಂಭದಿಂದಲೂ ಬಡತನದಲ್ಲಿ ಜೀವನ ಸಾಗಿಸುತಿತ್ತು. ಮನೆಯ ಅರ್ಥಿಕ ಪರಿಸ್ಥಿತಿ ತೀರ ಹಡಗೆಟ್ಟಿದ್ದ ಕಾರಣ ನಿಶಾಂತ್ ಎಸೆಸೆಲ್ಸಿಗೆ ಶಿಕ್ಷಣ ತ್ಯಜಿಸಿ ಶಾಮಿಯಾನ, ಲೈಟಿಂಗ್ ಮುಂತಾದ ಕೆಲಗಳನ್ನು ಮಾಡಿ ಮನೆಯ ಬಹುತೇಕ ಖರ್ಚುವೆಚ್ಚಗಳನ್ನು ನಿರ್ವಹಿಸುತ್ತಾ ಪುಟ್ಟ ವಯಸ್ಸಿನಲ್ಲೇ ಮನೆಗೆ ಆಧಾರಸ್ತಂಭವಾಗಿದ್ದ. ಜತೆಗೆ ಊರಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ.
ಆದರೆ ಮೊನ್ನೆ 2019ರ ಮೇ 17 ರಂದು ಈತನ ಬಾಳಿನ ಕರಾಳ ಶುಕ್ರವಾರವಾಗಿತ್ತು.
ಎಂದಿನಂತೆ ರಾತ್ರಿ ಸುಮಾರು 11 ಗಂಟೆಗೆ ಕೋಟ ಸಮೀಪದ ಉಪ್ಲಾಡಿಯ ಮದುವೆ ಮನೆಯೊಂದರಲ್ಲಿ ಲೈಟಿಂಗ್ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ಮಧುವನದಲ್ಲಿಎದುರಿನಿಂದ ಬರುತ್ತಿದ್ದ ಪಾನಮತ್ತ ಕಾರುಚಾಲಕನೋರ್ವ ಸಂಪೂರ್ಣವಾಗಿ ವಿರುದ್ಧ ದಿಕ್ಕಿಗೆ ಬಂದು ಈತನ ಬೈಕ್ಗೆ ಢಿಕ್ಕಿ ಹೊಡೆದಿದ್ದ. ಅಪಘಾತದ ರಭಸಕ್ಕೆ ಬೈಕ್ ಛಿದ್ರಗೊಂಡಿತ್ತು.
ಸಂಪೂರ್ಣ ರಕ್ತಸಿಕ್ತವಾಗಿ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಸ್ಥಳೀಯರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದರು. ಬದುಕುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿ ನಾಲ್ಕೈದು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ನಿಶಾಂತ್ ಕೊನೆಗೂ ಪ್ರಾಣಾಪಾಯದಿಂದ ಪಾರಾದ. ಆದರೆ ವೈದ್ಯರು ಸಾಕಷ್ಟು ಪ್ರಯತ್ನಪಟ್ಟರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಆತನ ಬಲಗಾಲನ್ನು ಕತ್ತರಿಸಬೇಕಾಯಿತು. ಇದೀಗ ಶಸ್ತ್ರಚಿಕಿತ್ಸೆ ನಡೆದಿದ್ದು ತೊಡೆಯ ಭಾಗದ ವರೆಗೆ ಕಾಲು ಕತ್ತರಿಸಲ್ಪಟ್ಟಿದೆ. ಕೈ ಕೂಡ ಸರ್ಜರಿ ಮಾಡಲಾಗಿದೆ. ದೇಹದ ಒಳ ಭಾಗಕ್ಕೂ ಸಾಕಷ್ಟು ಪೆಟ್ಟಾಗಿದ್ದು ನಾಲ್ಕು ಬಾರಿ ಬೇರೆ-ಬೇರೆ ಭಾಗಕ್ಕೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಆಸ್ಪತ್ರೆಯ ಐಸಿಯುನಲ್ಲಿ ಮಳಗಿರುವ ನಿಶಾಂತ್ಗೆ ಮುಂದೇನೂ ಎನ್ನುವ ಶ್ಯೂನ್ಯತೆ ಆವರಿಸಿದೆ. ಮನೆಯ ನಿರ್ವಹಣೆ, ತಂದೆ-ತಾಯಿಯ ಹೊಣೆಗಾರಿಕೆ, ಸಹೋದರಿಯ ವಿದ್ಯಾಭ್ಯಾಸ, ಮದುವೆ ಮುಂತಾದ ಜವಬ್ದಾರಿ ನಿರ್ವಹಿಸಬೇಕು ಎಂದುಕೊಂಡಿದ್ದ ಈತನ ಕನಸುಗಳು ನುಚ್ಚುನೂರಾಗಿದೆ. ಮಗನ ಈ ಪರಿಸ್ಥಿತಿ ನೋಡಿ ಹೆತ್ತವರು ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದಾರೆ. ಆತನ ಭವಿಷ್ಯ ಮುಂದೇನು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ.
ಆರ್ಥಿಕವಾಗಿ ನೆರವಾಗಿ:
ಈಗಾಗಲೇ ಈತನ ಆಸ್ಪತ್ರೆಯ ವೆಚ್ಚಕ್ಕೆ 3ಲಕ್ಷಕ್ಕೂ ಅಧಿಕ ವೆಚ್ಚವಾಗಿದ್ದು, ಮುಂದೆ ಐದು ಲಕ್ಷದ ತನಕ ಹಣ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಡತನದಲ್ಲಿರುವ ಇವರ ಕುಟುಂಬಕ್ಕೆ ಈ ಹಣವನ್ನು ಹೊಂದಿಸಲು ಸಾದ್ಯವಾಗುತ್ತಿಲ್ಲ ಹಾಗೂ ಸುಮಾರು ಐವತ್ತು ಸಾವಿರ ರೂ ಮೌಲ್ಯದ ಆರೋಗ್ಯ ವಿಮೆ ಹೊರತುಪಡಿಸಿದರೆ ಬೇರೆ ಯಾವುದೇ ವಿಮಾ ಸೌಲಭ್ಯವಿಲ್ಲ ಹೀಗಾಗಿ ಈ ಕುಟುಂಬಕ್ಕೆ ದಾನಿಗಳೇ ದಿಕ್ಕು ಎನ್ನುವಂತಾಗಿದೆ. ಹನಿ-ಹನಿ ಸೇರಿ ಹಳ್ಳ.. ತೆನೆ-ತೆನೆ ಸೇರಿ ಕಣಜ ಎನ್ನುವಂತೆ ದಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ನೊಂದ ಈ ಕುಟುಂಬಕ್ಕೆ ಸಾಂತ್ವಾನಪಡಿಸಲು ಹಾಗೂ ಆತನ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಲು ಕೈ ಜೋಡಿಸಬೇಕಿದೆ. ಸಹಾಯ ಮಾಡುವವರಿಗೆ ಉಳಿತಾಯ ಖಾತೆಯ ವಿವರ:
ಖಾತೆದಾರರ ಹೆಸರು :- ಜ್ಯೋತಿ ಎಸ್. ಶೆಟ್ಟಿ,
ಬ್ಯಾಂಕ್:- ವಿಜಯಾ ಬ್ಯಾಂಕ್.
ಶಾಖೆ:- ಸಾಬ್ರಕಟ್ಟೆ, ಖಾತೆ ಸಂಖ್ಯೆ :- 118501011000681
IFS CODE:- VIJB0001185
ಮಾಹಿತಿಗಾಗಿ ಸಂಪರ್ಕ:- ಸುರೇಶ ಶೆಟ್ಟಿ;- 9591460709.