“ನಾನೂ ಪೋಲಿಸ್ ಅಧಿಕಾರಿ ಆಗೇ ಆಗ್ತೇನೆ”ಎಂದು ಹೊರಟ ಆ ಹಳ್ಳಿ ಹುಡುಗ ಈಗ ಪೊಲೀಸ್ ಹುದ್ದೆಗೆ ರಾಜೀನಾಮೆ ಕೊಟ್ಟೂ ಆಯಿತು..

ತನ್ನ ತಂದೆಯ ಮೇಲೆ ಅದ್ಯಾರೋ ಸುಳ್ಳು ದೂರು ಕೊಟ್ಟು ಆತನಿಗೆ ಪೋಲಿಸರು ಎರ್ರಾಬಿರ್ರಿ ಎಳೆದುಕೊಂಡು ಹೋಗಿ ಅಮಾನವೀಯ ಶಿಕ್ಷೆ ಕೊಟ್ಟು ಯಾವ ದಯೆ ದಾಕ್ಷಿಣ್ಯವೂ ಇಲ್ಲದೇ ಆತನನ್ನು ಮನ ಬಂದಂತೆ ಜಡಿದಾಗ, ಏನೂ ತಪ್ಪನ್ನೇ ಮಾಡದ ತನ್ನ ಅಪ್ಪ ಹೀಗೆಲ್ಲಾ ಜೈಲಿನಲ್ಲಿ ಕೊಳೆಯುತ್ತಿರುವುದನ್ನು ನೋಡಿ ಆ ಹುಡುಗ ಪೂರ್ತಿ ಉರಿದೇ ಹೋದ.

ಅವನ ಎಳೆ ಕಣ್ಣುಗಳಲ್ಲಿ ಆ ದಾರುಣ ಚಿತ್ರಗಳು ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿತು. ಪೋಲೀಸ್ ವ್ಯವಸ್ಥೆಯ ಬಗ್ಗೆ ಆಕ್ರೋಶ ಅವನಲ್ಲಿ ಹೆಪ್ಪುಗಟ್ಟುತ್ತಲೇ ಹೋಯಿತು. ಆವತ್ತಿನಿಂದಲೇ ಅವನು  ಒಳಗೊಳಗೇ ಚಾಲೆಂಜು ಹಾಕಿದ ‘ನಾನೂ ಪೋಲಿಸ್ ಆಗಬೇಕು, ಇಂತಹ ಕರಾಳ ವ್ಯವಸ್ಥೆಗೆ ಪಿಂಡ ಪ್ರದಾನ ಮಾಡಬೇಕು, ವ್ಯವಸ್ಥೆಯನ್ನೂ ಚೂರಾದರೂ ಬದಲಾಯಿಸಿಯೇ ಬಿಡಬೇಕು’ ಎಂದು ಆಕ್ರೋಶದ ಕಿಡಿಗಳನ್ನು, ಕನಸುಗಳ ಕೋಲನ್ನು ಹಿಡಿದು, ಗೆದ್ದೇ ಗೆಲ್ಲುತ್ತೇನೆ ಎಂದು ಹೊರಟ ಆ ಹುಡುಗ ಪೊಲೀಸ್ ಅಧಿಕಾರಿಯಾಗಿ ಮಿಂಚಿ. ಇದೀಗ ತನ್ನ ಹುದ್ದೆಗೆ ರಾಜಿನಾಮೆ ಕೂಡ ಕೊಟ್ಟು ಬಿಟ್ಟಿದ್ದಾರೆ. 

ಯಸ್. ಇವತ್ತಷ್ಟೇ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹುದ್ದಗೆ ರಾಜೀನಾಮೆ ಕೊಟ್ಟ ಅಣ್ಣಾ ಮಲೈ ಅವರ ಕತೆಯಿದು. ಇವತ್ತು ಎಲ್ಲರೂ ಹುಬ್ಬೇರಿಸೋ ಮಟ್ಟಕ್ಕೆ ಬೆಳೆದು ಬಿಟ್ಟಿದ್ದಾರೆ. ನಿರಂತರ ಆಕ್ರೋಶ, ಸುನಾಮಿಯಂತ ಸಿಟ್ಟು, ಜನಸಾಮಾನ್ಯನ ಮೇಲಿನ ಸಕ್ಕರೆಯಂತ ಪ್ರೀತಿ, ವ್ಯವಸ್ಥೆ ಬದಲಾಯಿಸೋ ಉಲ್ಲಾಸದ ಮಂತ್ರದಂಢ, ಇವನ್ನೆಲ್ಲಾ ಹಿಡಿದು ಮುನ್ನುಗ್ಗುತ್ತಲೇ ಕಿರಿಯ ವಯಸ್ಸಲ್ಲೇ ಎಎಸ್.ಪಿ ಪಟ್ಟಕ್ಕೇರಿದ ಅಣ್ಣಾಮಲೈ ಅನ್ನೋ ಖಾಕಿಯ ರಿಯಲ್ ಖದರ್ ಅಪರಾಧಿಗಳ ನೆಮ್ಮದಿಯ ನಿದ್ದೆಗೆ ಕರಾಳ ದುಸ್ವಪ್ನ. ನಾವೇ ಅಣ್ಣ ಅಂತ ಬೀಗುತ್ತಿದ್ದ ಖದೀಮರ ಬೆವರಿಸಳಿಸೋ ಹಿರಿಯಣ್ಣ.

ಹಳ್ಳಿ ಹೈದನ ಕರಾಮತ್ತು-

ಅಣ್ಣಾ ಮಲೈ ಸಾಹೇಬರು ಹುಟ್ಟಿದ್ದು ತಮಿಳುನಾಡಿನ ಪುಟ್ಟ ಹಳ್ಳಿಯೊಂದರಲ್ಲಿ. ತಂದೆ ಕುಪ್ಪುಸ್ವಾಮಿ. ಕೃಷಿ ಮಾಡುತ್ತಲೇ ತುತ್ತಿನ ಚೀಲ ತುಂಬಿಕೊಳ್ಳೋ ಹಂಬಲದಿಂದಲೇ ಮಗನನ್ನು ಬೆಳೆಸಿದ. ಒಟ್ಟಾರೆ ಇವರ ಹಳ್ಳಿಜೀವನವೆಂದರೆ ಕಷ್ಟ, ಸಂಕಷ್ಟಗಳ ದಿಬ್ಬಣ. ತಂದೆಯ ಮೇಲೆ ಯಾರ್‍ಯಾರೋ ಹಾಕಿದ ಪೊಳ್ಳು ಆಪಾದನೆಗಳಿಗೆ, ಆತನಿಗೆ ನೀಡುತ್ತಿದ್ದ ಕೀಟಲೆಗಳನ್ನೆಲ್ಲಾ ನೋಡುತ್ತಿದ್ದ ಅಣ್ಣಾ ಮಲೈ ಅನ್ನೋ ಪೋರ ಆಕ್ರೋಶದ ಹುಲಿಯಾಗಿದ್ದು ಆಗಲೇ, 

ಒಟ್ಟಾರೆ ಪೋಲಿಸ್ ಇಲಾಖೆಯ ಕೆಲವೊಂದು ದಾರುಣ ಕಥೆಗಳೆಲ್ಲಾ, ಯಾರಿಗೂ ಗೊತ್ತಾಗದಂತೆ ಗಟ್ಟಿಯಾಗುತ್ತಿದ್ದ ಅಲ್ಲಿನ ಫಿಕ್ಸಿಂಗುಗಳನ್ನೆಲ್ಲಾ ಆಗಲೇ ಹುಡುಗನಿಗೆ ಕಾಡಿಯೇ ಕಾಡಿತ್ತು. ಮುಂದೆ ಮೆಕಾನಿಕಲ್ ಎಂಜಿನಿಯರಿಂಗ್ ಓದಿದ, ಎಂ.ಬಿ.ಎ ಮಾಡಿದ, ಸಿಂಗಾಪುರದಲ್ಲಿ ಒಳ್ಳೆ ಹುದ್ದೆ ಗಿಟ್ಟಿಸಿ ನೌಕರಿಯನ್ನೂ ಮಾಡಿದ, ಮುಂದೆ ತಾನು ಕನಸು ಕಂಡ ಐ.ಪಿ.ಎಸ್ ಓದಿ ಇಲಾಖೆ ಸೇರಿದ.  ಸಮಾಜದ ಜೊತೆ ಬೆರೆತು ಬಾಳಲು ಖಾಕಿಯ ಹದ್ದಿನ ಕಣ್ಣು ದನಿಯಾಯಿತು. ಪೋಲಿಸ್ ಕ್ಯಾಪ್‌ನಲ್ಲಿ ಮತ್ತೊಂದಿಷ್ಟು ಕನಸುಗಳು ಹುಟ್ಟಿಕೊಳ್ಳುತ್ತಲೇ ಹೋಯಿತು.

 ಕಾರ್ಕಳದಲ್ಲಿ ಹೀಗಿದ್ದರು:

 ಇವತ್ತು ಕೊಟ್ಟ ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ  ನಂಗೆ ಬೆಂಬಲಿಸಿದ ಕಾರ್ಕಳಕ್ಕೂ ಥ್ಯಾಂಕ್ಸ್ ಎಂದು ಬರೆದಿದ್ದಾರೆ. ಹೌದು ಇವರು ಕಾರ್ಕಳದಲ್ಲಿರೋವಾಗ  ಅದೂ ಎ.ಎಸ್.ಪಿ ಅಂತಹ ದೊಡ್ಡ ಹುದ್ದೆಯಲ್ಲಿರುವಾಗಲೂ ಜನಸಾಮಾನ್ಯನ ಮದ್ಯೆ ಬೆರೆತು ಅವರ ಕಷ್ಟಗಳಿಗೆ ದನಿಯಾಗುತ್ತಿದ್ದರು.  ಜನಸಾಮಾನ್ಯನೇ ಪೋಲಿಸರ ಮೂಲ ಆಸ್ತಿ, ಒಂದೊಂದು ಕೈಗಳೂ ಸಮಾಜದ ಶಕ್ತಿ . ಅವರಿದ್ದರಷ್ಟೇ ಖಾಕಿಯ ಕೆಲಸ ನಿಯತ್ತಾಗಿ ಸಾಗುತ್ತದೆ ಅಂತ ದೃಡವಾಗಿ ನಂಬುತ್ತಾ, ಒಂದೊಂದು ಬಡವನ ನಿಟ್ಟುಸಿರನ್ನೂ ಅರ್ಥಮಾಡಿಕೊಳ್ಳುವ ಅಣ್ಣಾ ಮಲೈಗೆ ಜನಸಾಮಾನ್ಯನ ಚಿಕ್ಕ ಪುಟ್ಟ ಆಕ್ರೋಶವೂ ಕಿವಿಗಪ್ಪಳಿಸುತ್ತಿತ್ತು. ಅಸಹಾಯಕನಿಗೆ ಸಹಾಯ ಮಾಡುವುದೇ ದೇವರ ಕೆಲಸ ಎಂದು ದೂರು ಹಿಡಿದುಕೊಂಡು ಬಂದವರ ದನಿಗೆ ಉಸಿರಾಗೋ ಈ ಎ.ಎಸ್.ಪಿಯ ಕಛೇರಿ ಅಂದರೆ ಅದೊಂದು  ಪುಟ್ಟ ದೇವಸ್ಥಾನ ಎಂದು ಭಕ್ತಿಯಿಂದ ಬರುವವರಿದ್ದರು. ದಿನಕ್ಕೆ ೫೦-೬೦ ಮಂದಿ ಎಎಸ್.ಪಿಯ ಕಛೇರಿಗೆ ಏನೇನೋ ದೂರು ಹಿಡಕೊಂಡು ಬಂದರೆ ಈ ಅಣ್ಣಾ ಅವರಿಗೆ ನಿಜವಾದ ಅಣ್ಣನೇ ಆಗಿಹೋಗುತ್ತಿದ್ದರು.  ಒಟ್ಟಾರೆ ಕಾರ್ಕಳ ಠಾಣೆ ಬರೀ ದೂರುಗಳ ಗೂಡಾಗಬಾರದು, ಎಲ್ಲ ದೂರುಗಳಿಗೂ ಉತ್ತರ ಸಿಗಬೇಕು, ಒಬ್ಬೊಬ್ಬನ ದನಿಗೂ ಅದರದ್ದೇ ಆದ ಘನತೆ ಇದೆ ಅನ್ನೋದು  ಇವರ ದಟ್ಟ ನಂಬುಗೆಯಾಗಿತ್ತು.  ಇದೀಗ ಹುದ್ದೆಗೆ ರಾಜೀನಾಮೆ ನೀಡಿ ಹೊಸ ಕನಸಿನತ್ತ ಸಾಗುತ್ತಿರುವ ಇವರಿಗೆ ಶುಭವಾಗಲಿ ಎನ್ನುವ ಹಾರೈಕೆ ನಮ್ಮದು.

-ಪ್ರಸಾದ್ ಶೆಣೈ