ಉಡುಪಿ : ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಸುಗಮವಾಗಿ ಮರಳು ಸಿಗಲು ಯಾವುದೇ ತೊಂದರೆಯಾಗದಂತೆ ಗಮನ ಹರಿಸಲು ರಾಜ್ಯ ಸರಕಾರದ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ತಿಳಿಸಿದ್ದಾರೆ.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಬರಪರಿಸ್ಥಿತಿ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಚತೆ ವಹಿಸಿ ಮಾತನಾಡಿದರು.
ಈಗಾಗಲೇ ಕೆ.ಆರ್.ಐ.ಡಿ.ಎಲ್ ಮೂಲಕ ಜಿಲ್ಲೆಯ ನಾನ್ ಸಿಆರ್ಝಡ್ ವಲಯದಲ್ಲಿ 2 ಬ್ಲಾಕ್ಗಳಿಂದ ಸಾರ್ವಜನಿಕರಿಗೆ ಮರಳು ಪೂರೈಸಲಾಗುತ್ತಿದೆ. ಕಳೆದ 2 ತಿಂಗಳುಗಳಲ್ಲಿ 23,854 ಮೆಟ್ರಿಕ್ ಟನ್ ಮರಳಿಗೆ ಸಾರ್ವಜನಿಕರಿಂದ ಬೇಡಿಕೆ ಬಂದಿದೆ. ಜಿಲ್ಲಾ ಪಂಚಾಯತ್ಗಳಿಗೆ ಹಂಚಿಕೆಯಾಗಿರುವ 3 ಮರಳು ಬ್ಲಾಕ್ಗಳಿಂದ ಮರಳು ತೆಗೆಯಲು ಕೂಡಲೆ ಟೆಂಡರ್ ಕರೆಯಲು ಅವರು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು. ಡ್ರೆಜ್ಜಿಂಗ್ ಮೂಲಕ ತೆಗೆದಿರುವ ಮರಳನ್ನು ವಿಲೇವಾರಿ ಮಾಡುವ ಸಂಬಂಧ ಕೂಡಲೆ ನಿರ್ಧಾರ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಕಾಯದರ್ಶಿ ತಿಳಿಸಿದರು.
ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿರುವ ಗ್ರಾಮಾಂತರ ಪ್ರದೇಶಗಳ ರಸ್ತೆಗಳ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಕುಂಟಿತವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಬಗ್ಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಜಿಲ್ಲೆಯ ನಗರ ಪಟ್ಟಣ ಪ್ರದೇಶಗಳಲ್ಲಿ ಯುಜಿಡಿ ಒಳಚರಂಡಿ ಕಾಮಗಾರಿ ಸಂಬಂಧ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಭೂನ್ಯಾಯ ಮಂಡಳಿಗಳ ಮುಂದೆ ಸಾಕಷ್ಟು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಮಹೇಶ್ವರ್ ರಾವ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.