ಉಡುಪಿ: ಉಡುಪಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯನ್ನು ಪರಿಷ್ಕರಿಸುವ ಸಲುವಾಗಿ, ಆಡಳಿತ ತರಬೇತಿ ಸಂಸ್ಥೆಯ ರಾಜ್ಯ ವಿಕೋಪ ನಿರ್ವಹಣಾ ಕೇಂದ್ರವತಿಯಿಂದ ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಗುರುವಾರ ಕಾರ್ಯಗಾರ ನಡೆಯಿತು.
ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್ , ವಿಕೋಪ ನಿರ್ವಹಣೆಯಲ್ಲಿ ಪ್ರತೀ ಇಲಾಖೆಯ ಪಾತ್ರ ಬಹು ಮುಖ್ಯ, ಜಿಲ್ಲಾ ಮಟ್ಟದಲ್ಲಿ ವಿಕೋಪಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆಯು ಅತ್ಯಗತ್ಯ. ಜಿಲ್ಲಾ ಮಟ್ಟದ ಯೋಜನೆಯನ್ನು ಪ್ರತೀ ವರ್ಷ ಪರಿಷ್ಕರಣೆಗೊಳಿಸಬೇಕು. ವಿಕೋಪ ನಿರ್ವಹಣಾ ಕಾಯಿದೆ-2005 ರಂತೆ ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಗಳನ್ನು ಗುರುತಿಸಿಕೊಂಡು ವಿಕೋಪ ನಿರ್ವಹಣೆಯನ್ನು ನಿಭಾಹಿಸಬೇಕೆಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ, ವಿದ್ಯಾ ಕುಮಾರಿ ಮಾತನಾಡಿ, ಎಲ್ಲಾ ಇಲಾಖೆಗಳ ವ್ಯವಸ್ಥಿತವಾದ ಮಾಹಿತಿಯನ್ನು ವಿಕೋಪ ನಿರ್ವಣೆಗಾಗಿ ಕ್ರೋಢೀಕರಿಸಿಕೊಳ್ಳಬೇಕು. ವಿಕೋಪ ಸಂದರ್ಭದಲ್ಲಿ ಸೂಕ್ತ ರೀತಿಯ ಸ್ಪಂದನೆಯನ್ನು ನಿರ್ವಹಿಸಬೇಕು ಎಂದರು.
ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ಭೋದಕರಾದ ಡಾ. ಪರಮೇಶ್ ಜೆ.ಆರ್ ಇವರು 2 ದಿನಗಳ ಕಾರ್ಯಗಾರದ ಸಂಯೋಜಕರಾಗಿ , ಜಿಲ್ಲಾ ವಿಪ್ಪತ್ತು ನಿರ್ವಹಣಾ ಯೋಜನೆಯಲ್ಲಿ ವಿಪತ್ತು ತಡೆಗಟ್ಟುವಿಕೆ, ವಿಪತ್ತು ಬಂದ ಸಂದರ್ಭದಲ್ಲಿ ಸೂಕ್ತ ಸ್ಪಂದನೆ ಹಾಗೂ ಪುನರ್‍ವಸತಿ ಸಂದರ್ಭದಲ್ಲಿ ಯೋಜನೆಯೂ ಹೇಗೆ ಉಪಯುಕ್ತವಾಗುತ್ತದೆ ಎಂದು ತಿಳಿಸಿದರು. 45 ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ವಿಕೋಪ ನಿರ್ವಹಣಾ ತಜ್ಞರಾದ ರಜನಿ ಓಜನಹಳ್ಳಿ ಇವರು ಪ್ರತೀ ಇಲಾಖೆಯ ಮಾಹಿತಿ, ಜವಾಬ್ದಾರಿ ಹಾಗೂ ಯೋಜನೆಗಳನ್ನು ಸಂಗ್ರಹಿಸಿ, ಕ್ರೋಡೀಕರಿಸಿ ಜಿಲ್ಲೆಯ ಪ್ರತೀ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ತಲುಪಿಸುವುದಾಗಿ ತಿಳಿಸಿದರು.