ಉಡುಪಿ : ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸುವ ಒಳರೋಗಿ/ಹೊರ ರೋಗಿಗಳ ಸಂಖ್ಯೆ ಹೆಚ್ಚಾದಾಗ, ವೈದ್ಯರ ಹಾಗೂ ಸಿಬ್ಬಂದಿಯವರ ಕೊರತೆಯ ಕಾರಣದಿಂದ ಚಿಕಿತ್ಸೆಯನ್ನು ನಿರಾಕರಿಸಿ ವಾಪಸ್ಸು ಕಳುಹಿಸದಂತೆ ಹಾಗ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರ ನೇಮಕಾತಿ ಮಾಡಿಕೊಳ್ಳುವುದರ ಜೊತೆಗೆ, ತಿಂಗಳಿಗೆ ಕನಿಷ್ಟ ೪೦೦ ಹೆರಿಗೆಗಳ ಗುರಿಯನ್ನು ಹೊಂದುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.
ಅವರು ಜುಲೈ ೨೦ ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ , ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯ ಕುರಿತು ನಡೆದ ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿನದ ೨೪ ಗಂಟೆಯೂ ಗರ್ಭಿಣಿ ಮಹಿಳೆಯರಿಗೆ ಸ್ಕ್ಯಾನಿಂಗ್ ಸೌಲಭ್ಯವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒದಗಿಸುವಂತೆ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಇದಕ್ಕೆ ಸಂಬಂದಿಸಿದಂತೆ ಜುಲೈ ಮಾಹೆಯಲ್ಲಿ ರೇಡಿಯಾಲಿಜಿಸ್ಟ್‌ರವನ್ನು ಪೂರ್ಣ ನೇಮಕಾತಿ ಮಾಡಿಕೊಳ್ಳುವುದರ ಮೂಲಕ ಈ ಸೌಲಭ್ಯ ಒದಗಿಸುವುದಾಗಿ ಬಿ.ಆರ್.ಎಸ್ ಸಂಸ್ಥೆ ಪರವಾಗಿ ವ್ಯವಸ್ಥಾಪಕರು ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅವಧಿ ಪೂರ್ಣ ಹೆರಿಗೆ ಪ್ರಕರಣ ಬಂದಾಗ ಯಾವುದೇ ದಾಖಲೆಗಳು ಇಲ್ಲದಿದ್ದರು ಸಹ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆಯನ್ನು ನೀಡಬೇಕು, ಚಿಕಿತ್ಸೆಯ ನಂತರದಲ್ಲಿ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಹಾಗೂ ಎ.ಬಿ.ಆರ್.ಕೆ ಯ ಅಡಿಯಲ್ಲಿ ರೆಫ್‌ರ್‌ನ್ನು ಜಿಲ್ಲಾ ಸರ್ಜನ್ ಮುಖಾಂತರ ಮಾಡುವಂತೆ ಜಿಲಾಧಿಕಾರಿಗಳು ವ್ಯವಸ್ಥಾಪಕರಿಗೆ ಸೂಚಿಸಿದರು.
.
ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಮತ್ತು ಕಾರ್ಕಳ ಆಸ್ಪತ್ರೆಯಲ್ಲಿ ಈಗಾಗಲೇ ಎನ್.ಆರ್.ಸಿ ವಿಭಾಗ ಪ್ರಾರಂಭವಾಗಿದ್ದು, ಉಡುಪಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತೆಯಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಸ್ಥಾಪಿಸಿದಾಗ, ಆಸ್ಪತ್ರೆಯ ವ್ಯವಸ್ಥಾಪಕರು ಸೆಪ್ಟಂಬರ್ ಮಾಹೆಯಿಂದ ಈ ಸೇವೆಯನ್ನು ಪ್ರಾರಂಭಿಸುವುದಾಗಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಡಾ. ಜಗದೀಶ್, ಜಂಟಿ ನಿರ್ದೇಶಕರು (ವೈದ್ಯಕೀಯ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬೆಂಗಳೂರು, ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಜಿ.ರಾಮ , ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಧುಸೂದನ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.