ಉಡುಪಿ: ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಕಾಲಂ 124ಎ ದೇಶದ್ರೋಹ ನಿಷೇಧ ಕಾಯ್ದೆಯನ್ನು ಸಂವಿಧಾನದಿಂದ ತೆಗೆದುಹಾಕುತ್ತೇವೆ. ಜಮ್ಮು–ಕಾಶ್ಮೀರದ ಸೈನಿಕರಿಗೆ ಕೊಟ್ಟಿರುವ ಸ್ವತಂತ್ರ ಅಧಿಕಾರವನ್ನು ಹಿಂಪಡೆಯುತ್ತೇವೆಂದು ಆಶ್ವಾಸನೆ ನೀಡಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಿದ್ದಾರ ಅಥವಾ ಭಯೋತ್ಪಾದಕರು ಮಾಡಿಕೊಟ್ಟಿದ್ದಾರ ಎಂಬ ಸಂಶಯ ಮೂಡುತ್ತಿದೆ.
ಕಾಂಗ್ರೆಸ್ ನಮ್ಮ ದೇಶವನ್ನು ಬಲಿಕೊಡಲು ಹೊರಟಿದೆ. ಕಾಶ್ಮೀರ ಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವ ಪಿತೂರಿ ನಡೆಸುತ್ತಿದೆ ಎಂದು ಬಿಜೆಪಿ
ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ನಿರ್ಧಾರವನ್ನು ಕೈಗೊಂಡರೆ ಯಾರು ಕೂಡ ಸರ್ಕಾರದ ವಿರುದ್ಧ ದಂಗೆ ಏಳಬಹುದು. ಶತ್ರು ದೇಶಗಳ ಪರವಾಗಿ ಜೈಕಾರ ಕೂಗಬಹುದು. ಇದು ಅಖಂಡ ಭಾರತಕ್ಕೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇದೆ. ಉಗ್ರರನ್ನು ಸದೆಬಡಿಯುವ ಉದ್ದೇಶದಿಂದ ಹಾಗೂ ದೇಶದ ಗಡಿ ರಕ್ಷಣೆಗಾಗಿ ಪ್ರಧಾನಿ ಮೋದಿ ಸೈನಿಕರಿಗೆ ಸ್ವತಂತ್ರ ಅಧಿಕಾರ ಕೊಟ್ಟಿದ್ದರು. ಅದನ್ನು ತೆಗೆದುಹಾಕಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ನಡೆಯನ್ನು ಗಮನಿಸಿದರೆ, ಇದೊಂದು ಪಾಕ್ ಪ್ರಧಾನಿ ಪ್ರಚೋದಿತ ಪ್ರಣಾಳಿಕೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಿಡಿಕಾರಿದರು.
ಯಾವ ಮುಖವನ್ನಿಟ್ಟುಕೊಂಡು ಜೆಡಿಎಸ್ ಚಿಹ್ನೆಗೆ ಮತ ಕೇಳುವುದೆಂದು ಜಿಲ್ಲೆಯ
ಕೆಲ ಕಾಂಗ್ರೆಸ್ ಮುಖಂಡರೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಮಗಳೂರು ಕ್ಷೇತ್ರ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿತ್ತು. ಉಡುಪಿ ಕ್ಷೇತ್ರದಿಂದ ಆಸ್ಕರ್ ಫರ್ನಾಂಡಿಸ್ ಅವರು ಐದು ಬಾರಿ ಗೆಲುವು ಸಾಧಿಸಿದ್ದರು. ಆದರೆ ಸದ್ಯ ಪುರ್ನವಿಂಗಡಣೆ ಆಗಿರುವ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮತಪತ್ರದಲ್ಲಿ ಕಾಂಗ್ರೆಸ್ ಚಿಹ್ನೆಯೇ ಮಯವಾಗಿದೆ. ಇದು ಸಂತೋಷಕ್ಕಿಂತ ಕಾಂಗ್ರೆಸ್ ಮೇಲೆ ಸಿಂಪತಿ ಹುಟ್ಟುವಂತೆ ಮಾಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಇಂತಹ ಹೀನಾಯಸ್ಥಿತಿ ಬರಬಾರದಿತ್ತು ಎಂದು ಲೇವಡಿ ಮಾಡಿದರು.
ಕಾಂಗ್ರೆಸ್‌ಗೆ ಬಂಡಾಯವಾಗಿ ಸ್ಪರ್ಧಿಸಿದ ಅಮೃತ್ ಶೆಣೈ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಹಾಗಾದರೆ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುತ್ತಿರುವ ಪ್ರಮೋದ್ ಮಧ್ವರಾಜ್ ಕೂಡ ಪಕ್ಷ ಬಿಟ್ಟಂತೆ, ಅವರನ್ನು ಉಚ್ಚಾಟಿಸಬೇಕಲ್ವಾ ಎಂದು
ಪ್ರಶ್ನಿಸಿದರು.
ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದಂತಹ ಸಂದರ್ಭದಲ್ಲಿ ಮೀನುಗಾರರಿಗೆ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನರೇಂದ್ರ ಮೋದಿ ಅವರು ಮೀನುಗಾರಿಕೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಮೀನುಗಾರರಿಗೆ ಪ್ರತ್ಯೇಕ ಇಲಾಖೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಸಂಸದೆ ಶೋಭಾ ಅವರು ಸಿಆರ್‌ಎಫ್ ನಿಧಿಯಿಂದ 380 ಕೋಟಿಯಷ್ಟು ಅನುದಾನವನ್ನು ಜಿಲ್ಲೆಗೆ ತಂದಿದ್ದಾರೆ. ದ್ವಿಪಥ ಕೊಂಕಣ್ ರೈಲ್ವೆ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ನಮ್ಮೊಟ್ಟಿಗೆ ಇದ್ದಾರೆ. ಅವರ ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರಮೋದ್ ಸೇರಿದಂತೆ ಯಾರಿಂದಲೂ ನಮ್ಮ ಮತ ಬುಟ್ಟಿಗೆ ಕೈಹಾಕಲು ಆಗಲ್ಲ. ಮೀನುಗಾರ ಸಮುದಾಯದವರು ಬಿಜೆಪಿ ಪಕ್ಷವನ್ನು ಬಿಟ್ಟುಹೋಗಲ್ಲ. ಅವರು ಶ್ರಮಜೀವಿಗಳು. ಪಕ್ಷದಿಂದ ಪಕ್ಷಕ್ಕೆ ಹಾರುವವರಲ್ಲ. ಅವರ ಪ್ರಾಮಾಣಿಕತೆಯ ಬಗ್ಗೆ ನಮಗೆ ಸಂಶಯವಿಲ್ಲ ಎಂದು ಹೇಳಿದರು.