ಉಡುಪಿ: ಇಂದಿನ ಯುವಜನಾಂಗ ಮಾದಕಲೋಕಕ್ಕೆ ಆಕರ್ಷಿತರಾಗಿ ತಮ್ಮ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಮಾದಕ ದ್ರವ್ಯ, ಕುಡಿತದ ಚಟಕ್ಕೆ ದಾಸರಾಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಯುವಕರು ಡ್ರಗ್ಸ್, ಮದ್ಯ ಸೇವಿಸಿ ವಾಹನಗಳನ್ನು ಚಲಾಯಿಸುತ್ತಿರುವ ಪರಿಣಾಮ ಅಪಘಾತಗಳ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಉಡುಪಿಯ ಶಿರ್ವ ಸುಭಾಷ್ ನಗರದ ಸ್ಮಾರ್ಟ್ ಆರ್ಟ್ ಕಲಾವಿದರು ಹೊಸವರ್ಷಕ್ಕೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ಬೆಡ್ ನಲ್ಲಿ ಜೀವನ್ಮರಣದ ಹೋರಾಟದಲ್ಲಿ ನರಳಾಡುತ್ತಿರುವ ಯುವಕನ ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಹೊಸವರ್ಷವನ್ನು ಸುರಕ್ಷಿತವಾಗಿ ಸ್ವಾಗತಿಸುವ ನಿಟ್ಟಿನಲ್ಲಿ
ಅಜಯ್ ನೇತೃತ್ವದಲ್ಲಿ ಸ್ಮಾರ್ಟ್ ಆರ್ಟ್ ಕಲಾವಿದರು ಶಿರ್ವ ಸುಭಾಷ್ ನಗರದಲ್ಲಿ ಈ ವಿನೂತನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಅಣಕು ಪ್ರದರ್ಶನದ ಮೂಲಕ ರಸ್ತೆ ಸುರಕ್ಷತೆ, ಹೆಲ್ಮೆಟ್ ಧರಿಸುವುದರ ಮಹತ್ವ ಹಾಗೂ ಮದ್ಯವಸನ, ಮಾದಕ ದ್ರವ್ಯದ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತಂತೆ ಜಾಗೃತಿ ಮೂಡಿಸಲಾಯಿತು. ಯುವಕರ ಕಾರ್ಯಕ್ಕೆ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
















