ಉಡುಪಿ: ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ; ಆರೋಪಿಯ ಬಂಧನ.

ಉಡುಪಿ, ಜು.5: ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಆರೋಪಿಯೊಬ್ಬನನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೊಳಲಗಿರಿ ಗ್ರಾಮದ ನರ್ನಾಡುಗುಡ್ಡೆ ನಿವಾಸಿ ಆರೋಪಿ ಸಂಜಯ್ ಕರ್ಕೇರ(28) ಬಂಧಿತ ಆರೋಪಿ. ಆರೋಪಿಯನ್ನು ಪೊಲೀಸರು ಉಡುಪಿಯ ಎರಡನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಸಂಜಯ್ ಕರ್ಕೆರ ಯುವತಿಯೊಬ್ಬಳನ್ನು ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದು, ಆರೋಪಿಯು ಯುವತಿಯನ್ನು 2024ರ ಜು.11ರಂದು ಕಳಸದ ಹೊಟೇಲ್ಗೆ ಕರೆದುಕೊಂಡು ಹೋಗಿ ರೂಂ ಮಾಡಿದ್ದು, ಅಲ್ಲಿ ಆಕೆಗೆ ಜ್ಯೂಸ್ನಲ್ಲಿ ಮತ್ತು ಬರುವ ವಸ್ತುವನ್ನು ಬೆರೆಸಿ ಕುಡಿಸಿದ್ದನು. ಇದರಿಂದ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆಯ ಮೇಲೆ ದೈಹಿಕ ಸಂಪರ್ಕ ನಡೆಸಿದ್ದನು ಎಂದು ದೂರಲಾಗಿದೆ. ಬಳಿಕ ಮದುವೆಯಾಗುವುದಾಗಿ ನಂಬಿಸಿದ ಆತ, ಇದೀಗ ಬೇರೆ ಹುಡುಗಿ ಯೊಂದಿಗೆ ಮದುವೆ ಆಗಲು ಪ್ರಯತ್ನಿಸುತ್ತಿದ್ದು ಆತ ಯುವತಿಗೆ ಮೋಸ ಮಾಡುವ ಉದ್ದೇಶದಿಂದ ಅತ್ಯಾಚಾರ ಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ