ಉಡುಪಿ: ಮನೆಯ ಆವರಣದಲ್ಲಿ ಅಗಾಧವಾದ ಔಷಧೀಯ ಗುಣ ಹೊಂದಿರುವ ತುಳಸಿ, ಅಲೆವೇರಾ, ಅಮೃತಬಳ್ಳಿಗಳನ್ನು ಬೆಳೆಸುವುದರಿಂದ ವಾತಾವರಣವನ್ನು ಶುದ್ಧಗೊಳಿಸಲು ಸಾಧ್ಯ. ದೆಹಲಿಯ ಕಲುಷಿತ ವಾತಾವರಣ ದೂರ ಮಾಡಲು ಮೊದಲು ಈ ಕೆಲಸ ಮಾಡಬೇಕು ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದರು.
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಎರಡನೆ ದಿನವಾದ ಭಾನುವಾರ ಮುಂಜಾನೆ ನಡೆದ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.
ಡೆಂಗಿ, ಚಿಕೂನ್ ಗುನ್ಯದಂತಹ ರೋಗಗಳಿಗೂ ತುಳಸಿ, ಅಲೆವೇರಾ, ಅಮೃತಬಳ್ಳಿ ಪರಿಣಾಮಕಾರಿ ಔಷಧವಾಗಿದೆ. ಇತರ ದಿನಗಳಿಗಿಂತ ಭಾನುವಾರ ಹೆಚ್ಚಿನ ಸಮಯವನ್ನು ಯೋಗಾಸನ, ಪ್ರಾಣಾಯಾಮ ಅಭ್ಯಾಸಗಳಿಗೆ ಮೀಸಲಿಡಬೇಕು. ರಜಾ ದಿನ ಎಂಬ ಕಾರಣಕ್ಕೆ ಭಾನುವಾರ ನಿದ್ರೆ ಹಾಗೂ ಹೊರಗಿನ ಆಹಾರಗಳಿಗೆ ಆದ್ಯತೆ ನೀಡುವುದು ಸರಿಯಲ್ಲ. ಪ್ರತಿಯೊಬ್ಬರು ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಜೀವನ ಶೈಲಿ ಬದಲಾಯಿಸಿ:
ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ರಾತ್ರಿ ಏಳು ಗಂಟೆಯೊಳಗೆ ಆಹಾರ ಸೇವಿಸಿದರೆ ಉತ್ತಮ. ಆದರೆ ರಾತ್ರಿ ಎಂಟು ಗಂಟೆಯನಂತರ ಆಹಾರ ಸೇವನೆ ಮಾಡಲೇ ಬಾರದು. ಅಕ್ಕಿ, ಗೋಧಿ ಪ್ರಮಾಣವನ್ನು ಕಡಿಮೆ ಮಾಡಿ ತರಕಾರಿಗಳ ಸೇವನೆ ಹೆಚ್ಚಿಸಬೇಕು. ಪ್ರತಿದಿನಕ್ಕೆ ಮೂರು ಲೀಟರ್ ನೀರು ಕುಡಿಯಬೇಕು ಎಂದರು.
ಕಪಾಲಭಾತಿ, ಭಸಿಕಾ, ಅನುಲೋಮ ವಿಲೋಮ, ಭ್ರಾಮರಿ ಮೊದಲಾದ ಪ್ರಾಣಯಾಮಗಳಿಂದಲೇ ಮಧುಮೇಹ,
ಬಿಪಿ, ಥೈರಾಯ್ಡ್ ಮೊದಲಾದ ರೋಗಗಳು ಗುಣವಾಗುತ್ತದೆ. ಜನ್ಮದಿನದಂದು ಕ್ಯಾಂಡಲ್ ಉರಿಸುವ ಬದಲು ಹವನಗಳನ್ನು ಮಾಡಬೇಕು. ಬಾಲಸೂರ್ಯನ ಬಿಸಿಲಿನಲ್ಲಿ ಒಂದು ಗಂಟೆ ನಿಂತರೆ ವಿಟಮಿನ್ ಡಿ ಕೊರತೆ ಆಗುವುದಿಲ್ಲ ಎಂದು ಹೇಳಿದರು.
ಎರಡನೆಯ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಮನಸ್ಸಿನ ಏಕಾಗ್ರತೆಗೆ, ದೈಹಿಕ ನೈರ್ಮಲ್ಯ, ಆರೋಗ್ಯ ವೃದ್ಧಿಗೆ ಯೋಗಾಸನ ಸಹಕಾರಿಯಾಗಿದೆ ಎಂದು ಹೇಳಿದರು.
ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಅವರ ಪತ್ನಿ ಅನ್ನಪೂರ್ಣ ಅನುವಾದಿಸಿದ ‘ಆಯುರ್ವೇದ ಸಿದ್ಧಾಂತದ ರಹಸ್ಯ’ ಪುಸ್ತಕವನ್ನು ರಾಮ್‌ದೇವ್ ಮತ್ತು ಪೇಜಾವರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ಸ್ವಾಮೀಜಿ ಹಾಜರಿದ್ದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ಣಾಟಕ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ, ಗೋಪಾಲಕೃಷ್ಣ ಸಾಮಗ, ಕರಂಬಳ್ಳಿ ಶಿವರಾಮ ಶೆಟ್ಟಿ, ಶಂಕರ ಶೆಟ್ಟಿ ಉಪಸ್ಥಿತರಿದ್ದರು. ಪತಂಜಲಿಯ ಮಹಿಳಾ ಪ್ರಭಾರಿ ಸುಜಾತಾ ಮಾರ್ಲ ಸ್ವಾಗತಿಸಿದರು.
ಯೋಗ ಮಯ ಕರ್ನಾಟಕ ಯೋಜನೆ
ಕರ್ನಾಟಕ ರಾಜ್ಯವನ್ನು ರೋಗಮುಕ್ತ ಮಾಡುವ ಉದ್ದೇಶದಿಂದ ಯೋಗ ಮಯ ಕರ್ನಾಟಕ ಎಂಬ ಯೋಜನೆಯನ್ನು ಆರಂಭಿಸಲಾಗುವುದು. ಇದಕ್ಕೆ ನುರಿತ ಯೋಗ ಶಿಕ್ಷಕರು ಬೇಕಾಗಿದ್ದು, ಆಸಕ್ತರಿಗೆ ತರಬೇತಿ ನೀಡಲಾಗುವುದು ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದರು.












