ಉಡುಪಿ: ದೇಶದ ಪುಣ್ಯ ಕ್ಷೇತ್ರಗಳಲ್ಲೊಂದಾದ ವರ್ಷಂಪ್ರತಿ ಕೋಟ್ಯಾಂತರ ಅಯ್ಯಪ್ಪ ವ್ರತಾಧಾರಿಗಳು ದೇವರ ದರ್ಶನಕ್ಕಾಗಿ ಭೇಟಿ ನೀಡುವ ಶಬರಿಮಲೆಯಲ್ಲಿ ಅಯ್ಯಪ್ಪ ವ್ರತಾಧಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಿಸುವಂತೆ ಕರ್ನಾಟಕ ಸರಕಾರದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಮಸ್ತ ಅಯ್ಯಪ್ಪ ಭಕ್ತರ ಪರವಾಗಿ ಯಶ್ಪಾಲ್ ಸುವರ್ಣ ಮನವಿ ಸಲ್ಲಿಸಿದರು.
ಹಿಂದೂ ಯುವಸೇನೆ ಉಡುಪಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತವೃಂದ ಬನ್ನಂಜೆ ಇದರ ನೇತೃತ್ವದಲ್ಲಿ ೨೬ನೇ ವರ್ಷದ ಶಬರಿಮಲೆ ಯಾತ್ರೆಯ ಅಂಗವಾಗಿ ನಡೆದ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿವರ್ಷ ಲಕ್ಷಾಂತರ ಮಂದಿ ಅಯ್ಯಪ್ಪ ಭಕ್ತಾದಿಗಳು ಕಟ್ಟುನಿಟ್ಟಿನ ವ್ರತಾಚರಣೆ ನಡೆಸಿ ಶಬರಿಮಲೆ ಯಾತ್ರೆ ನಡೆಸುತ್ತಿದ್ದು, ಈ ಯಾತ್ರೆಯ ಸಂದರ್ಭದಲ್ಲಿ ಸೂಕ್ತ ವಸತಿ, ಶೌಚಾಲಯ, ಪ್ರಥಮ ಚಿಕಿತ್ಸೆ, ವಿಶ್ರಾಂತಿ ಕೊಠಡಿ ಮೊದಲಾದ ಮೂಲ ಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮುಜರಾಯಿ ಇಲಾಖೆಯ ವತಿಯಿಂದ ಪಂಪ ಅಥವಾ ಶಬರಿಮಲೆ ಸನ್ನಿಧಿಯ ಪರಿಸರದಲ್ಲಿ ರಾಜ್ಯದ ಭಕ್ತರಿಗಾಗಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಿಸುವಂತೆ ಮನವಿ ಮಾಡಿದರು.
ರಾಜ್ಯದ ವಿವಿಧ ಹಲವು ಜಿಲ್ಲೆಗಳಿಂದ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಅಯ್ಯಪ್ಪ ಮಾಲಧಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳುವಂತೆ ಹಾಗೂ ಅಯ್ಯಪ್ಪ ವ್ರತಾಧಾರಿಗಳ ಅನುಕೂಲಕ್ಕಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೆ ೪ ತಿಂಗಳ ಕಾಲ ಕಾರವಾರದಿಂದ ಕೇರಳಕ್ಕೆ ವಿಶೇಷ ರೈಲು
ಸೇವೆ ಒದಗಿಸುವಂತೆ ಕೇಂದ್ರ ರೈಲ್ವೆ ಇಲಾಖೆಗೆ ಶಿಫಾರಸ್ಸು ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಜಯ್ ಗುರುಸ್ವಾಮಿ, ಹರೀಶ್ ರಾಮ್, ಸುಧಾಕರ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.