ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ದತ್ತಿ ಇಲಾಖೆಯ ಮೇಳಗಳ ಕಲಾವಿದರಿಗೆ ರಾಜ್ಯ ಸರ್ಕಾರ ಸಂಪೂರ್ಣ ವೇತನವನ್ನು ನೆರವಿನ ರೂಪದಲ್ಲಿ ನೀಡಿರುವುದು ಅಭಿನಂದನೀಯ. ಆದರೆ ಈ ಸೌಲಭ್ಯದಿಂದ 15 ತೆಂಕು ಬಡಗು ಖಾಸಗಿ ಮೇಳಗಳ ಸುಮಾರು 1500 ಕ್ಕೂ ಹೆಚ್ಚಿನ ಕಲಾವಿದರನ್ನು ಹೊರಗಿಟ್ಟು ಅನ್ಯಾಯ ಮಾಡಿದೆ ಎಂದು ಉಡುಪಿ ಖಾಸಗಿ ಯಕ್ಷಗಾನ ತೆಂಕುಬಡಗು ಮೇಳಗಳ ಕಲಾವಿದರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಇಂಥಾ ಕೊರೊನಾ ಕಷ್ಟ ಕಾಲದಲ್ಲಿ ಸರ್ಕಾರ ಕಲಾವಿದರ ಮಧ್ಯೆ ತಾರತಮ್ಯ ಮಾಡುವುದು ಸರಿಯಲ್ಲ. ಈ ಬಗ್ಗೆ ಹಲವಾರು ಬಾರಿ ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ನೋವುಂಟು ಮಾಡಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಖಾಸಗಿ ಕಲಾವಿದರ ಮನವಿಯನ್ನು ಪುರಸ್ಕರಿಸಿ ಸೌಲಭ್ಯ ನೀಡುವ ಕೆಲಸ ಮಾಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಖಾಸಗಿ ಯಕ್ಷಗಾನ ಕಲಾವಿದರಿಗೂ ದತ್ತಿ ಇಲಾಖೆಯ ಮೇಳಗಳ ಕಲಾವಿದರಂತೆ ವೇತನ ಸೌಲಭ್ಯ ನೀಡುವಂತೆ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಒಕ್ಕೂಟ ತಿಳಿಸಿದೆ.












