ಉಡುಪಿ : ಕರಾವಳಿಯ ಗಂಡು ಕಲೆ,ಆರಾಧನಾ ಕಲೆ ಯಕ್ಷಗಾನ. ಈ ಕಲೆಯನ್ನೇ ನಂಬಿ ಬದುಕುವ ನೂರಾರು ಕಲಾವಿದರಿದ್ದಾರೆ. ಆದರೆ ಮಳೆಗಾಲ ಬಂತೆಂದರೆ ಯಕ್ಷಗಾನ ಮೇಳಗಳ ತಿರುಗಾಟ ಇರೋದಿಲ್ಲ. ಅಲ್ಲೊಂದು ಇಲ್ಲೊಂದು ಅಪರೂಪದ ಪ್ರದರ್ಶನಗಳು ಬಿಟ್ಟರೆ ಕಲಾವಿದರು ನಿರುದ್ಯೋಗಿಗಳು ಎನ್ನಬಹುದು. ಹಾಗಾಗಿ ಮೇಳದ ಕಲಾವಿದರಿಗೆ ಮಳೆಗಾಲದಲ್ಲಿ ಜೀವನ ನಿರ್ವಹಣೆ ಹೇಗೆ ಎನ್ನುವ ಚಿಂತೆ ಮೂಡುವುದು ಸಹಜ. ಹೀಗಾಗಿ ಮಳೆಗಾಲದಲ್ಲಿ ಮನೆಮನೆಗೆ ಹೋಗಿ ಗೆಜ್ಜೆ ಸೇವೆಯ ಮೂಲಕ ಕಲಾವಿದರು ತಮ್ಮ ಬದುಕಿನ ನಿರ್ವಹಣೆ ಮಾಡಿಕೊಳ್ಳುತ್ತಾರೆ. ಈ ಮೇಳಗಳನ್ನು ಚಿಕ್ಕಮೇಳ ಎಂದು ಮನೆಗಳಲ್ಲಿ ಬರ ಮಾಡಿಕೊಳ್ಳಲಾಗುತ್ತದೆ. ಗೆಜ್ಜೆ ಪೂಜೆ ಎಂದು ಕರೆಯುವ ಮೂಲಕ ಕರಾವಳಿಯ ಮನೆ ಮನಗಳಲ್ಲಿ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತದೆ. ಇದನ್ನು ಗೆಜ್ಜೆ ಸೇವೆ ” ಎಂದೂ ಕರೆಯಲಾಗುತ್ತದೆ.
ಒಂದು ಊರಿನ ಹಲವು ಮನೆಗಳಿಗೆ ತೆರಳಿ ಚಿಕ್ಕ ಮೇಳ ಬರುವ ಸಮಯವನ್ನು ಮೊದಲೇ ತಿಳಿಸಲಾಗುತ್ತದೆ. ದಿನದಲ್ಲಿ ಸಂಜೆ 7ರಿಂದ ರಾತ್ರಿ 10ರ ತನಕ ಚಿಕ್ಕ ಮೇಳಗಳು ತಿರುಗಾಟ ನಡೆಸುತ್ತವೆ. ಮನೆಗೆ ಬಂದ ಕಲಾ ತಂಡವನ್ನು ಮನೆಯವರು ಸ್ವಾಗತಿಸುತ್ತಾರೆ. ಹೂ, ಹಣ್ಣು, ಅಕ್ಕಿ, ತೆಂಗಿನಕಾಯಿ ಮತ್ತು ದೀಪ ಇಟ್ಟು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಯಾವುದಾದರೂ ಒಂದು ಪ್ರಸಂಗದ ಚಿಕ್ಕ : ಭಾಗವನ್ನು ಮನೆಯಲ್ಲಿ ಪ್ರದರ್ಶಿಸುತ್ತಾರೆ. ” ಒಂದು ಸ್ತ್ರೀ ವೇಷ ಇನ್ನೊಂದು ಪುರುಷ ವೇಷಧಾರಿ ಮತ್ತು ಹಿಮ್ಮೇಳದ ಇಬ್ಬರು ಕಲಾವಿದರು ತಂಡದಲ್ಲಿರುತ್ತಾರೆ. ಪ್ರತಿ ಮನೆಯಲ್ಲಿ ಕಲಾವಿದರಿಗೆ ಕಾಣಿಕೆಯನ್ನೂ ನೀಡಲಾಗುತ್ತದೆ. ಈ ಮೂಲಕ ಮಳೆಗಾಲದಲ್ಲಿ ಯಕ್ಷ ಸೇವೆಯ ಜೊತೆ ತನ್ನ ಬದುಕಿನ ನಿರ್ವಹಣೆಯನ್ನು ಕಲಾವಿದ ಕಂಡುಕೊಳ್ಳುತ್ತಾನೆ.
ಒಂದೆಡೆ ತನ್ನ ಜೀವನ ನಿರ್ವಹಣೆ, ಇನ್ನೊಂದೆಡೆ ಕಲಾ ಸೇವೆ ಹೀಗೆ ಚಿಕ್ಕ ಮೇಳ ಮಳೆಗಾಲದಲ್ಲೂ ಯಕ್ಷಗಾನದ ಕಂಪನ್ನು ಮನೆಮನೆಗೆ ಪಸರಿಸುತ್ತದೆ. ಈ ಮೂಲಕ ಮಕ್ಕಳಿಗೆ ಮನೆಮಂದಿಗೆ ಮನರಂಜನೆಯನ್ನೂ ಒದಗಿಸಿ ಯಕ್ಷಗಾನ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.












