ಉಡುಪಿ : ಡಿಸೆಂಬರ್ 10ರಂದು ವೈಕುಂಠ ಬಾಳಿಗ ಕಾನೂನು ಕಾಲೇಜ್ ನಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ

                                                                                                                                       ಉಡುಪಿ ಕುಂಜಿಬೆಟ್ಟಿನ ವೈಕುಂಠ ಬಾಳಿಗ ಕಾನೂನು ವಿಶ್ವವಿಧ್ಯಾಲಯದ ವತಿಯಿಂದ ಮಾನವ ಹಕ್ಕುಗಳ ಘಟಕ ಹಾಗೂ ಎನ್ನೆಸ್ಸೆಸ್ ಘಟಕ 1,2 ರ ಸಹಯೋಗದಲ್ಲಿ ಬುಧವಾರ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟಿಸಿ ಮಾತನಾಡಿದ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗೀಯ ಅಧ್ಯಕ್ಷ ಶ್ರೀ ಉದಯ್ ನಾಯ್ಕ್, ಪ್ರತಿಯೊಬ್ಬರೂ ಬದುಕಿನಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡರೆ, ಮಾನವ ಹಕ್ಕುಗಳ ಉಲ್ಲಂಘನೆ ಸಮಸ್ಯೆ ಎದುರಾಗುವುದಿಲ್ಲ. ಘನತೆ, ಸಮಾನತೆ, ಮಾನವ ಹಕ್ಕುಗಳು ಬೆಲೆ, ಗೌರವ ಕೊಡುವ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು ಎಂದರು.

ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ನಿವ್ರತ್ತ ಹಿರಿಯ ವಿಭಾಗೀಯ ವ್ಯವಸ್ಥಾಪಕ ಶ್ರೀ ರಮೇಶ್ ನಾಯ್ಕ್.ಕೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಸುರೇಖಾ ಕೆ. ಅಧ್ಯಕ್ಷತೆ ವಹಿಸಿ ಮಾನವ ಹಕ್ಕುಗಳನ್ನು ಸ್ವಯಂ ಜಾಗ್ರತಿ, ಕಾನೂನಿನಿಂದ ರಕ್ಷಿಸಬೇಕು. ಮಕ್ಕಳು ಪುಸ್ತಕ ಹೊರೆಯ ನಡುವೆ ಮಾನವ ಸಂಪರ್ಕವಿಲ್ಲದಂತೆ ಬೆಳೆಯುತ್ತಿದ್ದಾರೆ. ಮನುಷ್ಯರಾಗಿ ಬದುಕುವುದು ಅಗತ್ಯ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾ ಆಧಿಕಾರಿ ಡಾ|ಪ್ರೀತಿ ಹರೀಶ್ ರಾಜ್, ಮಾನವ ಹಕ್ಕುಗಳ ವಿಭಾಗೀಯ ನಿರ್ದೇಶಕಿ ಶ್ರೀಮತಿ ಮಾಲತಿ ರಮೇಶ್ ಉಪಸ್ಥಿತರಿದ್ದರು. ಎನ್ ಎಸ್ ಎಸ್ ಸಂಯೋಜನಾಧಿಕಾರಿ ಶ್ರೀ ನವೀನ್ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀಮತಿ ವೈಭವಿ ಪಡಿಯಾರ್ ಸ್ವಾಗತಿಸಿ, ಅಂಜುಶ್ರೀ ಅತಿಥಿ ಪರಿಚಯ ಮಾಡಿದರು. ದೀಪಕ್ ಕಾಮತ್ ನಿರೂಪಿಸಿ, ಕಾರ್ತಿಕ್ ನಾಯಕ್ ವಂದಿಸಿದರು.