ಉಡುಪಿ:ಮದ್ಯದಂಗಡಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಕುರಿತು ಕಾರ್ಯಾಗಾರ

ಉಡುಪಿ: ಸರ್ಕಾರದ ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಉಳಿದಿರುವ ಅಬಕಾರಿ ಸನ್ನದುಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಹರಾಜಿನಲ್ಲಿ ಪಾರದರ್ಶಕತೆ ಕಾಪಾಡುವುದರೊಂದಿಗೆ ಬಿಡ್ಡುದಾರರಿಗೆ ತಾಂತ್ರಿಕ ಮಾಹಿತಿ ನೀಡಲು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಬಿಡ್‌ದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಹೆಚ್. ಹೇಳಿದರು.

ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅಬಕಾರಿ ಇಲಾಖೆ ವತಿಯಿಂದ ಐದು ವರ್ಷಗಳ ಮದ್ಯದ ಸನ್ನದುಗಳನ್ನು ಪಡೆಯಲು ಸಂಭಾವ್ಯ ಬಿಡ್‌ದಾರರರಿಗೆ ನಡೆದ ತರಬೇತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸಿರುವಂತೆ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಿಸುವ ಭಾಗವಾಗಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಇರುವ ಸನ್ನದುಗಳನ್ನು ಇ-ಹರಾಜು ಮೂಲಕ ಹರಾಜು ಮಾಡಿ ರಾಜಸ್ವ ಸಂಗ್ರಹಿಸಲು ಮುಂದಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಇರುವ ಒಟ್ಟು 569 ಸನ್ನದುಗಳನ್ನು ಇ-ಹರಾಜು ಮಾಡಿ ಸಂಭಾವ್ಯ ಬಿಡ್‌ದಾರರಿಗೆ ನೀಡಲು ನಿರ್ಧರಿಸಲಾಗಿದೆ ಎಂದರು.

ಅಬಕಾರಿ ಇಲಾಖೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಿಎಲ್-2ಎ ಮತ್ತು ಸಿಎಲ್-9ಎ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಇರುವ ಸನ್ನದುಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಎಂ.ಎಸ್.ಟಿ.ಸಿ ಲಿಮಿಟೆಡ್‌ನ ಪೋರ್ಟಲ್‌ನಲ್ಲಿ ಇ-ಹರಾಜು ಪ್ರಕ್ರಿಯೆ ನಡೆಸಲಾಗುವುದು. ತರಬೇತಿ ಕಾರ್ಯಕ್ರಮದಲ್ಲಿ ಬಿಡ್‌ದಾರರಿಗೆ ಅಬಕಾರಿ ಇಲಾಖೆಯ ನಿಯಮಗಳು, ಇ-ಹರಾಜು ಪ್ರಕ್ರಿಯೆ, ಟೆಂಡರ್ ನಿರ್ವಹಣೆ, ಆನ್‌ಲೈನ್ ವ್ಯವಸ್ಥೆ ಬಳಕೆ, ಬಿಡ್ ಸಲ್ಲಿಸುವ ವಿಧಾನ, ಲೈಸೆನ್ಸ್ ಪಡೆಯುವ ಬಗ್ಗೆ ಸೇರಿದಂತೆ ಮತ್ತಿತರೆ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.

ಉಡುಪಿ ಜಿಲ್ಲೆಯಲ್ಲಿ 8 ಸಿಎಲ್-2ಎ ಸನ್ನದುಗಳನ್ನು ಸಾಮಾನ್ಯ ವರ್ಗಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಎಲ್-9ಎ ನ 1 ಹಾಗೂ ಸಿಎಲ್-2ಎ ನ 29 ಸೇರಿದಂತೆ ಒಟ್ಟು 30 ಸನ್ನದುಗಳನ್ನು ಸಾಮಾನ್ಯ ಹಾಗೂ ಎಸ್.ಸಿ/ಎಸ್.ಟಿ ವರ್ಗಕ್ಕೆ ಹಂಚಿಕೆ ಮಾಡಲಾಗಿದೆ. ಯಶಸ್ವಿ ಬಿಡ್‌ದಾರರಾಗಿ ಹೊರಹೊಮ್ಮಲು 21 ವರ್ಷ ಮೇಲ್ಪಟ್ಟ, ಕರ್ನಾಟಕದ ನಿವಾಸಿಗಳಾಗಿರುವ, ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲದ ನೋಂದಣಿಯಾದ ಬಿಡ್‌ದಾರರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದ ಅವರು, ಯಾವುದೇ ವ್ಯಕ್ತಿ, ನೋಂದಾಯಿತ ಸೀಮಿತ ಪಾಲುದಾರಿಕೆ ಸಂಸ್ಥೆಗಳು, ಕಂಪನಿಗಳು, ಟ್ರಸ್ಟ್ ಹಾಗೂ ಸೊಸೈಟಿಗಳು ಬಿಡ್‌ನಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದರು.

ಇ-ಹರಾಜಿನಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಪ್ರಕ್ರಿಯೆಗಳು ಆರಂಭವಾಗಿದ್ದು, ಜನವರಿ 13 ರಿಂದ 20 ರ ವರೆಗೆ ನೇರ ಹರಾಜು ನಡೆಯಲಿದೆ. ಉಡುಪಿಯಲ್ಲಿ ಜ. 20 ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಹರಾಜು ನಡೆಯಲಿದ್ದು, ಬಿಡ್‌ದಾರರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಯಾವುದೇ ಭಾಗದಲ್ಲಿಯೂ ಸಹ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಇ-ಹರಾಜು ಕುರಿತು ವಿಸ್ತೃತ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಹೆಚ್ಚು ಜನರು ಉತ್ಸಾಹದಿಂದ ಭಾಗವಹಿಸಿ, ಬಿಡ್‌ನ ಪ್ರಕ್ರಿಯೆಯ ಬಗ್ಗೆ ಮಾಹಿತಿಗಳನ್ನು ಪಡೆದಿದ್ದು, ಕಂಡುಬAದಿತು.
ಕಾರ್ಯಕ್ರಮದಲ್ಲಿ ಉಡುಪಿಯ ಅಬಕಾರಿ ಉಪ ಆಯುಕ್ತ ಟಿ.ಎಂ ಶ್ರೀನಿವಾಸ್, ಎಂ.ಎಸ್.ಟಿ.ಸಿ ಲಿಮಿಟೆಡ್‌ನ ಬ್ರಿಜೇಶ್ ಹಾಗೂ ಸತ್ಯಸಾಯಿ, ಅಬಕಾರಿ ಅಧೀಕ್ಷಕರುಗಳು, ಇಲಾಖೆಯ ಅಧಿಕಾರಿಗಳು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಿಡ್‌ದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಪ್ರಭು ಗೌಡ ಪಾಟೀಲ್ ಸ್ವಾಗತಿಸಿ, ಮಂಗಳೂರು ಅಬಕಾರಿ ಉಪ ನಿರೀಕ್ಷಕ ರಾಘವೇಂದ್ರ ನಿರೂಪಿಸಿ, ವಂದಿಸಿದರು.