ಉಡುಪಿ: ನಗರ ಪರವಾನಿಗೆ ಹೊಂದಿರುವ ರಿಕ್ಷಾ ಚಾಲಕರಿಗೆ ಹೈಕೋರ್ಟ್ ಆದೇಶ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಸುತ್ತೋಲೆಯಂತೆ ನಗರ ಪ್ರದೇಶ ಮತ್ತು ಪ್ರತೀ ನಿಲ್ದಾಣದ ವ್ಯಾಪ್ತಿ ಪ್ರದೇಶದ 7 ಕಿ.ಮೀನಲ್ಲಿ ದುಡಿಯಲು ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್ ಹಿಂಬದಿ ರಸ್ತೆಯ ನಗರ ಪರವಾನಿಗೆ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರವಾಧ್ಯಕ್ಷ ವಿಠ್ಠಲ ಜತ್ತನ್ನ ಅವರು, ಈ ಬಗ್ಗೆ 6 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇತರ ನಿಲ್ದಾಣದ ಚಾಲಕರು ಅಲ್ಲಿಗೆ ದುಡಿಯಲು ಹೋದಾಗ ಹಲ್ಲೆ ಮಾಡುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ ಎಂದರು.
ಆಶ್ರಯದಾತ ಯೂನಿಯನ್ ತಿಳಿಸಿದಂತೆ ದೊಡ್ಡ ರಿಕ್ಷಾ ನಿಲ್ದಾಣಗಳಲ್ಲಿ 5 ಹಾಗೂ ಸಣ್ಣ ನಿಲ್ದಾಣಗಳಲ್ಲಿ 3 ಅಥವಾ 2 ರಿಕ್ಷಾಗಳು ದುಡಿಯಬಹುದು ಎಂದು ಹೇಳಿಕೆ ನೀಡಿರುವುದು ಕಾನೂನಾತ್ಮಕವಾಗಿಲ್ಲ. ಇದೊಂದು ಕಾನೂನು ಬಾಹಿರ ಪ್ರಕಟನೆಯಾಗಿದೆ. ಇದರಲ್ಲಿ ನಗರ ಪರವಾನಿಗೆ ಚಾಲಕರಿಗೆ ದುಡಿಯಲು ತೊಂದರೆ ಮಾಡಿ, ಗೂಂಡಾಗಿರಿ ನಡೆಸಿದ ಹಲವು ಪ್ರಕರಣಗಳೂ ದಾಖಲಾಗಿವೆ ಎಂದರು.
ನಗರ ಪರವಾನಿಗೆ ಚಾಲಕರಿಗೆ ಕಾನೂನು ರೀತಿಯಲ್ಲಿ ಆದೇಶ ಹೊರಡಿಸದಿದ್ದರೆ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದರು.
15ರಿಂದ 20 ದಿನದೊಳಗೆ ಷರತ್ತು ಇಲ್ಲದೆ ನಗರಭಾಗದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಬೇಕು. ಇಲ್ಲದಿದ್ದರೆ ಈ ವಿಚಾರದ ಬಗ್ಗೆ ಸಾರಿಗೆ ಸಚಿವರ ಗಮನಕ್ಕೆ ತರಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಹೋರಾಟಕ್ಕೂ ಸಿದ್ದ ಎಂದು ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಚೆನ್ನಕೇಶವ ಭಟ್, ಅಧ್ಯಕ್ಷ ರಾಜೇಶ್ ಬಿ.ಶೆಟ್ಟಿ, ಕಾರ್ಯದರ್ಶಿ ಪ್ರಸಾದ್ ಪೂಜಾರಿ, ಮೋಹನ್ರಾವ್ ದೇಶಪಾಂಡೆ ಇದ್ದರು.


















