ಉಡುಪಿ ಮಹಿಳಾ ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿ ವೇದಿಕೆ ಮತ್ತು ಪ್ರತಿಭಾ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮ

ಉಡುಪಿ:ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇಲ್ಲಿನ 2022-23ನೇ ಸಾಲಿನ ವಿದ್ಯಾರ್ಥಿ ವೇದಿಕೆ ಮತ್ತು ಪ್ರತಿಭಾ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಂಗಳವಾರ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳಲಾಯಿತು.
ನಾಡೋಜ ಡಾ. ಜಿ.ಶಂಕರ್ ಕಾಲೇಜಿನ ಮಹಾ ಪೋಷಕರು ಕಾರ್ಯಕ್ರಮವನ್ನು ಉದ್ಘಾಟಿಸಿ “ಉಡುಪಿ ಜಿಲ್ಲೆಯ ಲೀಡ್ ಕಾಲೇಜು ಆಗಿರುವ ನಮ್ಮ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜು ಕೂಡ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ರಾಜ್ಯ, ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯೂ ನಡೆಯುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿನಿಯರು ತಮ್ಮ ಓದು, ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭಾ ಸಾಧನೆಗಳ ಕಡೆಗೆ ಗಮನ ಹರಿಸಬೇಕು, ಸಮಸ್ಯೆಗಳನ್ನು ಬಗೆಹರಿಸಲು ಕಾಲೇಜಿನ ಆಡಳಿತ ಮಂಡಳಿ ಸದಾ ವಿದ್ಯಾರ್ಥಿಗಳ ಪರವಾಗಿ ನಿಲ್ಲುತ್ತದೆ” ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ 2021-22ನೇ ಸಾಲಿನ ವಾರ್ಷಿಕ ಸಂಚಿಕೆ “ಕಲಶ” ವನ್ನು ಬಿಡುಗಡೆ ಮಾಡಿದ, ಭರತ್ಯನಾಟ್ಯ ಕಲಾವಿದೆ, ಚಿತ್ರನಟಿ, ವಿದುಷಿ ಶ ಮಾನಸಿ ಸುಧೀರ್ ಮಾತನಾಡುತ್ತಾ “ಒಬ್ಬ ವ್ಯಕ್ತಿಯ ಸೌಂದರ್ಯ ಅಡಗಿರುವುದು ಆತನ ಆತ್ಮ ವಿಶ್ವಾಸದಲ್ಲಿ. ಕಾಲೇಜಿನ ಪ್ರತಿಭಾ ದಿನಾಚರಣೆ ಇಂತಹ ಆತ್ಮ ವಿಶ್ವಾಸಗಳಿಗೆ ವೇದಿಕೆಯಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವತಂತ್ರ ಮನಸ್ಸು, ಸೃಜನಶೀಲತೆ ಮತ್ತು ತೊಡಗಿಸಿಕೊಳ್ಳುವಂತಹ ಗುಣಗಳಿಂದ ಸಿಗುವ ಅವಕಾಶಗಳ ಸದ್ಬಳಕೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಯಶ್‌ಪಾಲ್ ಸುವರ್ಣ ಅಧ್ಯಕ್ಷರು ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಮಂಗಳೂರು ಮತ್ತು ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದು ಕಾಲೇಜಿನ ಹೆಸರು ರಾಜ್ಯದ ಮೂಲೆ ಮೂಲೆಗಳಿಗೂ ತಲುಪಿದೆ ಇದಕ್ಕೆ ಕಾರಣ ಕಾಲೇಜಿನ ವಿದ್ಯಾರ್ಥಿನಿಯರು. ವಿದ್ಯಾರ್ಥಿನಿಯರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಾಡಿರುವ ಸಾಧನೆಯಿಂದ ಇದು ಸಾಧ್ಯವಾಗಿದೆ. ಇನ್ನು ಮುಂದೆಯೂ ಇಂತಹ ಸಾಧನೆ ವಿದ್ಯಾರ್ಥಿನಿಯರ ಕಡೆಯಿಂದ ನಡೆಯಬೇಕು. ಇದಕ್ಕೆ ಬೇಕಾಗಿರುವ ಸೌಕರ್ಯಗಳನ್ನು ಪೂರೈಸುವಲ್ಲಿ ನಾವು ಸದಾ ನಿಮ್ಮೊಂದಿಗೆ ಇದ್ದೇವೆಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಮುಖ್ಯ ಅಂಗವಾಗಿ ಕಾಲೇಜಿನ ಸಹಪ್ರಾಧ್ಯಾಪಕ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ಹೊಂದಿದ ಪ್ರೊ. ಭಾಸ್ಕರ ಶೆಟ್ಟಿ ಎಸ್, ಪ್ರೊ. ಶ್ರೀಧರ್‌ಪ್ರಸಾದ ಕೆ, ಪ್ರೊ. ನಿಕೇತನ ಮತ್ತು ಪ್ರೊ. ರವಿರಾಜ ಶೆಟ್ಟಿ ಇವರುಗಳಿಗೆ ಗೌರವ ಸಮರ್ಪಿಸಲಾಯಿತು. ಕಾಲೇಜಿನ ಕ್ರೀಡಾ ಪ್ರತಿಭೆ ಮತ್ತು ಅಂತರ್‌ರಾಷ್ಟ್ರೀಯ ಪವರ್‌ಲಿಫ್ಟಿಂಗ್‌ನಲ್ಲಿ 2 ಚಿನ್ನದ ಪದಕವನ್ನು ಗೆದ್ದ ಕು. ಪ್ರತೀಕ್ಷಾ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಪ್ರೊ. ಭಾಸ್ಕರ ಶೆಟ್ಟಿ ಎಸ್ ವಹಿಸಿದ್ದು, ಇಂದು ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರ ತಂಡ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇದು ಸಹಾಯವಾಗಿದೆ. ನಮ್ಮ ಕಾಲೇಜು ಸರಕಾರಿ ಕಾಲೇಜು ಆಗಿದ್ದರೂ ಸಹ ವಾಣಿಜ್ಯ, ವಿಜ್ಞಾನ, ಗಣಕಯಂತ್ರ, ಮತ್ತು ಕಲಾವಿಭಾಗಗಳು ಕಾರ್ಯನಿರ್ವಹಿಸಲು ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಕಾಲೇಜಿನ ಆಡಳಿತಮಂಡಳಿ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಡಾ. ವಾಣಿ ಆರ್ ಬಲ್ಲಾಳ್., ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ,
 ಸೋಜನ್ ಕೆ.ಜಿ., ಸಂಚಾಲಕರು ಐಕ್ಯೂಎಸಿ, ಶ ಗೌರಿ ಎಸ್ ಭಟ್ ಡೀನ್., ವಾಣಿಜ್ಯ ನಿಕಾಯ, ರಾಮಚಂದ್ರ ಅಡಿಗ ಜಿ ಡೀನ್., ವಿಜ್ಞಾನ ನಿಕಾಯ, ಪ್ರೊ. ನಿಕೇತನ  ಡೀನ್., ಕಲಾ ನಿಕಾಯ, ಪ್ರೊ. ಶ್ರೀಧರ್‌ಪ್ರಸಾದ ಕೆ., ಸಂಯೋಜಕರು ಸ್ನಾತಕೋತ್ತರ ವಿಭಾಗ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕು. ಅನುಷ ಎಂ.ಎಸ್ ನಿರೂಪಿಸಿ, ಪ್ರಾಂಶುಪಾಲರು   ಪ್ರೊ. ಭಾಸ್ಕರ ಶೆಟ್ಟಿ ಎಸ್., ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾ ಡಿ., ಸಂಚಾಲಕರು ಸಾಂಸ್ಕೃತಿಕ ಸಂಘ ಇವರು ವಂದಿಸಿದರು.