ಉಡುಪಿ: ಇನ್ ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬರಿಗೆ ಐವತ್ತು ಸಾವಿರ ಪಂಗನಾಮ ಹಾಕಿದ ಮಾಯಾಂಗನೆ

ಉಡುಪಿ: ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬರಿಗೆ ಐವತ್ತು ಸಾವಿರಕ್ಕೂ ಹೆಚ್ಚು ರೂಪಾಯಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗೂರಿನ ನಾಗರಾಜ್ ಪೂಜಾರಿ (27) ವಂಚನೆಗೆ ಒಳಗಾದ ವ್ಯಕ್ತಿ. ಇವರಿಗೆ ಕಳೆದ 20 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್ ನಲ್ಲಿ ಆರೋಪಿ ಬೆರ್ನಿಟ್ ವಿನ್ಸೆಂಟ್ ಪರಿಚಯವಾಗಿತ್ತು.

ಈಕೆ ತಾನು ಲಂಡನ್ ಡಬ್ಲ್ಯೂಎಚ್‌ಒ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವುದಾಗಿ ಹೇಳಿ ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದರು. ಬಳಿಕ ದೂರವಾಣಿ ಸಂಖ್ಯೆ ಪಡೆದು, ನಿತ್ಯ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ಮಧ್ಯೆ ಆಕೆ ಸೆ.14ರಂದು ಭಾರತಕ್ಕೆ ಬಂದು, ವ್ಯವಹಾರಕ್ಕೆ ಬಂಡವಾಳ ಹೂಡುವುದಾಗಿ ನಂಬಿಸಿದ್ದರು. ಅದರಂತೆ ಸೋಮವಾರ ನಾಗರಾಜ್ ಅವರಿಗೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ‘ನಿಮ್ಮ ಗೆಳತಿ ಬೆರ್ನಿಟ್ ವಿನ್ಸೆಂಟ್ ಭಾರತಕ್ಕೆ ಬಂದಿದ್ದು, ಡಿ.ಡಿ.ರಿಜಿಸ್ಟ್ರೇಶನ್ ಮೊತ್ತ 58,800ರೂ. ಪಾವತಿಸುವಂತೆ ಬ್ಯಾಂಕ್ ಖಾತೆ ಸಂಖ್ಯೆ ನೀಡಿದ್ದಾರೆ. ನಾಗರಾಜ್ ಆನ್‌ಲೈನ್‌ನಲ್ಲಿ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ಕೆಲ ಗಂಟೆಗಳ ಬಳಿಕ ಅದೇ ವ್ಯಕ್ತಿ ಕರೆ ಮಾಡಿ ನಿಮ್ಮ ಗೆಳತಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲು 45,500 ರೂ. ಪಾವತಿಸುವಂತೆ ಹೇಳಿದ್ದಾರೆ. ಇದ್ದರಿಂದ ಅನುಮಾನಗೊಂಡ ನಾಗರಾಜ್ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.