ಉಡುಪಿ: ರೈಲು ಅಪಘಾತದಿಂದ ಎರಡು ಕಾಲುಗಳನ್ನು ಕಳೆದುಕೊಂಡು ಎತ್ತಲೂ ಸಂಚರಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಬಾಬೀ ರಾಮ್ ಬಾಬು ಅವರಿಗೆ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಎಂಡ್ ಸರ್ಜಿಕಲ್ಸ್ ಸಂಸ್ಥೆಯವರು ಗಾಲಿ ಕುರ್ಚಿಯನ್ನು ಉಚಿತವಾಗಿ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಗಾಲಿ ಕುರ್ಚಿ ಹಸ್ತಾಂತರ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕ ರವೀಂದ್ರ ಶೆಟ್ಟಿ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ರಮೇಶ್ ಕಿದಿಯೂರ್, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.
ಫಲಾನುಭವಿ ಬಾಬೀ ಅವರು ಉದ್ಯಾವರ ಕಟ್ಟೆಗುಡ್ಡೆಯ ವಸತಿ ಸಂಕೀರ್ಣದಲ್ಲಿ ಸೆಕ್ಯೂರ್ಟಿ ಗಾರ್ಡ್ ಆಗಿ ಉದ್ಯೋಗ ನಿರ್ವಹಿಸುತ್ತಿದ್ದರು. ಅಸಹಾಯಕತೆಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯಲ್ಲಿ ಹೇಳಿಕೊಂಡು, ಗಾಲಿಕುರ್ಚಿ, ಮತ್ತು ಕೃತಕ ಕಾಲು ಜೋಡಿಸುವಂತೆ, ನೆರವು ಯಾಚಿಸಿದ್ದರು.
ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು, ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಮೌಖಿಕವಾಗಿ ಮನವಿ ಮಾಡಿದ್ದರು. ಮನವಿಗೆ ತಕ್ಷಣ ಸ್ಪಂದಿಸಿದ ಸಂಸ್ಥೆಯವರು ಗಾಲಿ ಕುರ್ಚಿಯನ್ನು ನೀಡಿ ನೆರವಾಗಿದ್ದಾರೆ. ಕೃತಕ ಕಾಲು ಜೋಡಣೆಗೆ ದುಬಾರಿ ವೆಚ್ಚ ತಗುಲಲಿದ್ದು, ಅದಕ್ಕಾಗಿ ಹಣದ ಸಂಗ್ರಹ ಕಾರ್ಯವೂ ನಡೆಯುತ್ತಿದೆ.