ಉಡುಪಿ: ವೀಕೆಂಡ್ ಕರ್ಫ್ಯೂ ಗೊಂದಲ; ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟನೆ

ಉಡುಪಿ: ಲಾಕ್ ಡೌನ್ ನಿಂದ ಉಡುಪಿ ಜಿಲ್ಲೆಗೆ ವಿನಾಯಿತಿ ಸಿಕ್ಕಿದರೂ, ವೀಕೆಂಡ್ ಕರ್ಫ್ಯೂ ಬಗ್ಗೆ ಜಿಲ್ಲೆಯ ಜನರಲ್ಲಿ ಬಹಳಷ್ಟು ಗೊಂದಲಗಳು ಉಂಟಾಗಿದ್ದವು. ಇದಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರೇ ವಿಡಿಯೋ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ವಿಕೇಂಡ್ ಕರ್ಫ್ಯೂ ಶುಕ್ರವಾರ (ಜೂನ್ 18) ಸಂಜೆ ಏಳು ಗಂಟೆಯಿಂದ ಸೋಮವಾರ (ಜೂನ್ 21) ಬೆಳಿಗ್ಗೆ 5ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿ ಯಲ್ಲಿ ಅಗತ್ಯವಸ್ತುಗಳ ಖರೀದಿ ಹಾಗೂ ಮಾರಾಟಕ್ಕೆ ಮತ್ತು ಮದ್ಯ ಖರೀದಿಗೆ ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಹೋಮ್ ಡಿಲಿವರಿ, ಹೊಟೇಲ್‌ಗಳಲ್ಲಿ ಪಾರ್ಸೆಲ್, ತುರ್ತು ಚಿಕಿತ್ಸೆಗೆ ರೋಗಿಗಳು ಮತ್ತು ಪರಿಚಕರಗಳಿಗೆ, ದೂರವಾಣಿ, ಇಂಟರ್‌ನೆಟ್ ಸೇವೆ, ಅಗತ್ಯ ವಸ್ತುಗಳ ಸರಬರಾಜು, ದೂರದಿಂದ ಊರುಗಳಿಂದ ರೈಲು ಹಾಗೂ ವಿಮಾನದಲ್ಲಿ ಬರುವವರು ಮನೆಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಪೂರ್ವ ನಿಗದಿತ ಮದುವೆಯಲ್ಲಿ 40 ಮಂದಿ ಮತ್ತು ಅಂತ್ಯ ಸಂಸ್ಕಾರದಲ್ಲಿ ಐದು ಮಂದಿಗೆ ಅವಕಾಶ ನೀಡಲಾಗಿದೆ. ಇವುಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಚಟುವಟಿಕೆಗಳು ಸ್ತಬ್ಧ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಯಾವುದು ಬಂದ್:
ಸಾಮಾನ್ಯ ದಿನಗಳಲ್ಲಿ ತೆರೆದಿಡಲಾಗುತ್ತಿದ್ದ ಕಟ್ಟಡ ಸಾಮಾಗ್ರಿ ಮಾರಾಟ ಮಳಿಗೆ, ಫ್ಯಾಕ್ಟರಿಗಳು ಈ ಎರಡು ದಿನಗಳಲ್ಲಿ ಬಂದ್ ಆಗಿರುತ್ತವೆ. ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ವಿಕೇಂಡ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಸೂಚನೆ ನೀಡಲಾಗಿದೆ ಎಂದರು.