ಉಡುಪಿ: ಎರಡು ದಿನಗಳ‌ ವ್ಯಾಪಾರ ‌ಮೇಳ-ವಸ್ತು ‌ಪ್ರದರ್ಶನಕ್ಕೆ ಚಾಲನೆ

ಉಡುಪಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ, ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಮಂಗಳೂರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ- ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ವ್ಯಾಪಾರ ಮೇಳ ಹಾಗೂ
ವಸ್ತುಪ್ರದರ್ಶನ ‘ಉದ್ಯಮ್‌ ಸಮಾಗಮ್‌’ಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ. ರಘುಪತಿ ಭಟ್‌, ಸುನಿಲ್‌ ಕುಮಾರ್‌, ಬಿ.ಎಂ. ಸುಕುಮಾರ್‌ ಶೆಟ್ಟಿ, ಲಾಲಾಜಿ ಆರ್‌. ಮೆಂಡನ್‌, ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರೀತಿ
ಗೆಹ್ಲೋಟ್‌ ಹಾಜರಿದ್ದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಕಾರ್ಪೊರೇಶನ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪಿ.ವಿ. ಭಾರತಿ ಮಾತನಾಡಿ, ಉದ್ಯಮ ನಡೆಸಲು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ಅವರಿಗೆ ಬೇಕಾದ ಕೌಶಲ ತರಬೇತಿ ಹಾಗೂ ಬಂಡವಾಳ ಸಹಿತ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬ್ಯಾಂಕ್‌ ಸೇರಿದಂತೆ ವಿವಿಧ ಸಂಸ್ಥೆ ಮತ್ತು ಸರ್ಕಾರ ಸಿದ್ಧವಿದೆ ಎಂದರು.
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐ.ಆರ್‌. ಫರ್ನಾಂಡಿಸ್‌ ಮಾತನಾಡಿ, ಬ್ಯಾಂಕ್‌ ಸಾಲ ಕ್ಲಪ್ತ ಸಮಯಕ್ಕೆ ಸಿಗಲಿ ಕೈಗಾರಿಕೆಗಳಿಗೆ ಬ್ಯಾಂಕ್‌ಗಳು ನೀಡುವ ಸಾಲ ಕ್ಲಪ್ತ ಸಮಯಕ್ಕೆ ಸಿಗದಿದ್ದರೆ ಯಾವುದೇ ಪ್ರಯೋಜನ ಇಲ್ಲ. ಸರಿಯಾದ ಸಮಯಕ್ಕೆ ಸಾಲ ಸಿಗದ ಪರಿಣಾಮ ಇಂದು ಕೈಗಾರಿಕಾ ಕ್ಷೇತ್ರದಲ್ಲಿ ಹಿನ್ನೆಡೆ ಕಾಣುತ್ತಿದ್ದೇವೆ. ಕರಾವಳಿ ಜಿಲ್ಲೆಯ ಕೈಗಾರಿಕೆಗಳು ತಯಾರಿಸುವ ಉತ್ಪನ್ನಗಳು ಬಹಳಷ್ಟು ಗುಣಮಟ್ಟದಿಂದ ಕೂಡಿದ್ದು, ಅತ್ಯಂತ ಬೇಡಿಕೆ ಹೊಂದಿದೆ ಎಂದರು.
ನ್ಯಾಶನಲ್‌ ಕಾನೂನು ಲಾ ಸ್ಕೂಲ್‌ ಯುನಿವರ್ಸಿಟಿಯ ಪ್ರೊ. ರಾಮಕೃಷ್ಟ, ಎಕ್ಸ್‌ಪೋರ್ಟ್‌ ಕೌನ್ಸಿಲ್‌ನ ಕೆ.ಎನ್‌. ತುಳಸಿದಾಸ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವಾಮನ ನಾಯಕ್‌, ಎಂಎಸ್‌ಎಂಇನ ಸಹಾಯಕ ನಿರ್ದೇಶಕ ಗೋಪಿನಾಥ್‌ ರಾವ್‌, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಂ. ವಲ್ಲಭ್‌ ಭಟ್‌, ಮಾಜಿ ಅಧ್ಯಕ್ಷ ವಿಶ್ವನಾಥ್‌ ಭಟ್‌, ಮಾಜಿ ಕಾರ್ಯದರ್ಶಿ ವಂಸತ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆಯ ಉಪನಿರ್ದೇಶಕ ಕೆ. ಸಾಕ್ರಟೀಸ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಎಸ್‌ಎಂಇ ಸಹಾಯಕ ನಿರ್ದೇಶಕ ಸುಂದರ್‌ ಶೇರಿಗಾರ್‌ ಕಾರ್ಯಕ್ರಮ ನಿರೂಪಿಸಿದರು.