ಉಡುಪಿ: ಕೃಷ್ಣಮಠದಲ್ಲಿ ವಿಟ್ಲಪಿಂಡಿ ಉತ್ಸವ ಸಂಪನ್ನ

ಉಡುಪಿ: ಕೋವಿಡ್‌ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಮಂಗಳವಾರ ಸರಳ ಹಾಗೂ ಸಾಂಪ್ರದಾಯಿಕವಾಗಿ ವಿಟ್ಲಪಿಂಡಿ ಉತ್ಸವ ನೆರವೇರಿತು. ರಥಬೀದಿಯಲ್ಲಿ ನಡೆದ ಕೃಷ್ಣನ ಲೀಲೋತ್ಸವಗಳನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಸುವರ್ಣ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಕನಕ ನವರತ್ನ ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರನ ಮೂರ್ತಿಗಳನ್ನು ಇಡಲಾಗಿತ್ತು. ಎರಡೂ ರಥಗಳು ರಥಬೀದಿಯ ಸುತ್ತ ಮೆರವಣಿಗೆಯಲ್ಲಿ ಸಾಗಿದವು.

ರಥಬೀದಿಯಲ್ಲಿ 14 ಗುರ್ಜಿಗಳಲ್ಲಿ ಕಟ್ಟಲಾಗಿದ್ದ ಮೊಸರಿನ ಕುಡಿಕೆಗಳನ್ನು ಗೊಲ್ಲ ವೇಷಧಾರಿಗಳು ಒಡೆದು ಸಂಭ್ರಮಿಸಿದರು. ಬಳಿಕ, ಅದಮಾರು ಶ್ರೀಗಳು ದೇವರ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಿ ಉತ್ಸವಕ್ಕೆ ತೆರೆ ಎಳೆದರು.