ಆತ್ಮಹತ್ಯೆ ಜಾಗತಿಕ ಸವಾಲಾಗಿ ಪರಿಣಮಿಸಿದೆ: ಪ್ರೊ.ಕೆ.ಎಸ್. ಅಡಿಗ

ಉಡುಪಿ: ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಸಾವಿಗೆ ಪ್ರಮುಖ ಕಾರಣವಾಗುತ್ತಿದ್ದು, ಇದು ಜಾಗತಿಕ ಸವಾಲಾಗಿ ಪರಿಣಮಿಸಿದೆ ಎಂದು ಉಡುಪಿ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ಎಸ್. ಅಡಿಗ ಹೇಳಿದರು.
ಕಮಲ ಎ. ಬಾಳಿಗಾ ಚಾರಿಟೇಬಲ್‌ ಟ್ರಸ್ಟ್‌ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಹಾಗೂ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಬಾಳಿಗಾ ಆಸ್ಪತ್ರೆಯ ಕಮಲ ಬಾಳಿಗಾ ಸ್ಮಾರಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ವರದಿಯೊಂದರ ಪ್ರಕಾರ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಬಲಿ ಆಗುತ್ತಿದ್ದಾನೆ. ಪ್ರತಿ ಮೂರು ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುತ್ತಾನೆ. ಅಮೆರಿಕಾ ದೇಶದಲ್ಲಿಯೂ ಕೂಡ ವ್ಯಕ್ತಿಯ ಸಾವಿಗೆ ಪ್ರಮುಖ ಕಾರಣಗಳಲ್ಲಿ ಆತ್ಮಹತ್ಯೆ ಹತ್ತನೆ ಸ್ಥಾನದಲ್ಲಿದೆ ಎಂದರು.
35ರಿಂದ 50 ವರ್ಷದೊಳಗಿನವರಲ್ಲಿ ಆತ್ಮಹತ್ಯೆ ಸಾವಿನ ಪ್ರಮುಖ ನಾಲ್ಕನೇ ಕಾರಣವಾಗಿದ್ದು, 14ರಿಂದ 34 ವರ್ಷದೊಳಗಿನವರಲ್ಲಿ ಎರಡನೇ ಸ್ಥಾನದಲ್ಲಿದೆ. ಮಹಿಳೆಯರಿಗಿಂತ ಪುರುಷರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಮೂರು ಪಟ್ಟು ಹೆಚ್ಚಾಗಿದ್ದು, ಮಹಿಳೆಯರಲ್ಲಿ ಆತ್ಮಹತ್ಯೆಯ ಪ್ರಯತ್ನದ ಪ್ರಮಾಣ ಶೇ. 20ರಷ್ಟು ಅಧಿಕವಾಗಿದೆ. ನಿಮಾನ್ಸ್‌ನ ವರದಿ ಪ್ರಕಾರ ಕರ್ನಾಟಕ ರಾಜ್ಯ ಒಂದರಲ್ಲಿಯೇ 350 ಮಿಲಿಯನ್‌ ಜನರಿಗೆ ಮಾನಸಿಕ ಆರೋಗ್ಯದ ರಕ್ಷಣೆಗೆ ಮಾರ್ಗದರ್ಶನದ ಅಗತ್ಯವಿದೆ ಎಂದು ತಿಳಿಸಿದರು.
ಹದಿಹರೆಯದವರು ಆತ್ಮಹತ್ಯೆ ಶರಣಾಗುವುದರಿಂದ ಆಗುವ ನೋವು ಇಡೀ ಕುಟುಂಬವನ್ನೇ ಆಘಾತಕ್ಕೆ ತಳ್ಳುತ್ತದೆ. ಸಮಾಜದ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಸಾಕಷ್ಟು ಸಂಪನ್ಮೂಲ ನಷ್ಟ ಆಗುತ್ತದೆ. ಆತ್ಮಹತ್ಯೆ ಎನ್ನುವುದು ಈಗಿನ ಸಮಸ್ಯೆಯಲ್ಲ, ಇದು ಬಹಳ ಪುರಾತನವಾದುದು. ಸೂಕ್ಷ್ಮ ಸನ್ನೆ ಅಥವಾ ಸುಳಿವುಗಳನ್ನು ಆಧರಿಸಿ, ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆಯನ್ನು ಪ್ರೇರೆಪಿಸುವುದರ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು
ಹೇಳಿದರು.
ಕೂಡು ಕುಟುಂಬದ ಅವನತಿಯೇ ಪ್ರಮುಖ ಕಾರಣ ಹಿಂದಿನ ಕಾಲದಲ್ಲಿ ಯಾವುದೇ ಸಮಸ್ಯೆಯನ್ನು ಕುಟುಂಬದವರ ಜತೆಗೆ ಚರ್ಚಿಸುತ್ತಿದ್ದೇವು. ಮಕ್ಕಳು ತಪ್ಪು ಮಾಡಿದಾಗ ಅಜ್ಜಅಜ್ಜಿಯಂದಿರು ಬುದ್ಧಿ ಹೇಳುತ್ತಿದ್ದರು. ಆದರೆ ಈಗ ಮಕ್ಕಳಿಗೆ ತಿಳುವಳಿಕೆ ಮೂಡಿಸುವವರು ಯಾರು ಇಲ್ಲ. ಹಾಗಾಗಿ ಆತ್ಮಹತ್ಯೆಗೆ ಕೂಡು ಕುಟುಂಬದ ಅವನತಿ ಸಹ ಮುಖ್ಯ ಕಾರಣ. ಸೋಲು ಯಾವತ್ತು ಶಾಶ್ವತ ಅಲ್ಲ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಕೀಳರಿಮೆಯಿಂದ ಹೊರಬರಬೇಕು. ಮಾನಸಿಕ ಆರೋಗ್ಯದ
ಸದೃಢತೆ ಕಾಯ್ದುಕೊಳ್ಳುವ ಮೂಲಕ ನಮ್ಮ ಎಲ್ಲ ಚಟುವಟಿಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಮಾತನಾಡಿ, ಭಾರತ ದೇಶಕ್ಕೆ 36 ಸಾವಿರ ಮನೋತಜ್ಞರ ಅಗತ್ಯವಿದೆ. ಆದರೆ ಈಗ ಇರುವುದು ಕೇವಲ 9 ಸಾವಿರ ಮಾತ್ರ ಮನೋವೈದ್ಯರು. ಇಂದು ಆತ್ಮಹತ್ಯೆ ಸಾವಿಗೆ ಪ್ರಮುಖ ಕಾರಣವಾಗಿದೆ. ಆದರೂ ಅದರ ನಿಯಂತ್ರಣಕ್ಕೆ ರಾಷ್ಟ್ರೀಯ ಕಾರ್ಯಕ್ರಮವಿಲ್ಲ. ಹಾಗಾಗಿ ಆತ್ಮಹತ್ಯೆಯ ವಿರುದ್ಧ ಹೋರಾಡಲು ಸರ್ಕಾರದ ಜತೆಗೆ ಸರ್ಕಾರೇತರ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸೌಜನ್ಯ ಶೆಟ್ಟಿ, ಮನೋವೈದ್ಯ ಡಾ. ದೀಪಕ್‌ ಮಲ್ಯ ಉಪಸ್ಥಿತರಿದ್ದರು. ಮನೋವೈದ್ಯ ಡಾ. ನಾಗರಾಜ್‌ ಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್‌ ಎಸ್‌. ನಾವೂರು ವಂದಿಸಿದರು. ಪಂಚಮಿ
ಮತ್ತು ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು.