ಉಡುಪಿ: ಗ್ರಾಮ ಪಂಚಾಯತ್ ಉಪ ಚುನಾವಣೆ -2025 ಕ್ಕೆ ಸಂಬಂಧಿಸಿದಂತೆ, 1993 ರ ಕರ್ನಾಟಕ ಪಂಚಾಯತ್
ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಜಿಲ್ಲೆಯಲ್ಲಿನ ಉಡುಪಿ ತಾಲೂಕಿನ ಉದ್ಯಾವರ ಗ್ರಾಮ ಪಂಚಾಯತಿಯ -1 (ಮೀಸಲಾತಿ-ಸಾಮಾನ್ಯ), ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯತಿಯ ಕಟ್ಟಿಂಗೇರಿ -1 (ಮೀಸಲಾತಿ-ಹಿಂದುಳಿದ ವರ್ಗ ಅ (ಮಹಿಳೆ) ಹಾಗೂ ಪಡುಬಿದ್ರೆ ಗ್ರಾಮ ಪಂಚಾಯತಿಯ ಪಾದಬೆಟ್ಟು-1 (ಮೀಸಲಾತಿ-ಅನುಸೂಚಿತ ಜಾತಿ)
ಸದಸ್ಯ ಸ್ಥಾನಗಳು ಸೇರಿದಂತೆ ಒಟ್ಟು 3 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವಂತೆ ವೇಳಾಪಟ್ಟಿಯನ್ನು ನಿಗಧಿಪಡಿಸಿ, ರಾಜ್ಯ ಚುನಾವಣಾ ಆಯೋಗವು ಅಧಿಸೂಚಿಸಿದ್ದು, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993 ರ
ನಿಯಮ 12 ರ ಅನ್ವಯ ಉಪ ಚುನಾವಣೆಯ ವೇಳಾಪಟ್ಟಿಯನ್ನು ಈ ಕೆಳಗಿನಂತೆ ನಿಗಧಿಪಡಿಸಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿರುತ್ತಾರೆ.
ಮೇ 8 ರಿಂದ ನಾಮಪತ್ರಗಳನ್ನು ಸ್ವೀಕರಿಸುವ ಪ್ರಾರಂಭದ ದಿನವಾಗಿದ್ದು, ನಾಮಪತ್ರಗಳನ್ನು ಸಲ್ಲಿಸಲು ಮೇ 14 ಕೊನೆಯ ದಿನ. ಮೇ 15 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 17 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ 25 ರಂದು ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದ್ದು, ಮೇ 28 ರಂದು ತಾಲೂಕು ಕೇಂದ್ರ ಸ್ಥಳಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕಾ ಕಾರ್ಯಗಳು ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












