ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಮತ್ತು ಡಾ. ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ ಜನ್ಮವರ್ಧಂತ್ಯುತ್ಸವ ಸಮಿತಿ ಉಡುಪಿ ಇದರ ಆಶ್ರಯದಲ್ಲಿ ಈಶಾವಾಸ್ಯ ಪ್ರತಿಷ್ಠಾನ ಅಂಬಲಪಾಡಿ ಇವರ ಸಹಯೋಗದಲ್ಲಿ “ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ನವತಿ ಜನ್ಮವರ್ಧಂತಿ ಉತ್ಸವ ಕಾರ್ಯಕ್ರಮ”ವನ್ನು ಇದೇ ಆ.9ರಂದು ಸಂಜೆ 5.30ಕ್ಕೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಿರಿಯ ಸುಶೀಂದ್ರತೀರ್ಥ ಶ್ರೀಪಾದರು ಬನ್ನಂಜೆ ಗೋವಿಂದಾಚಾರ್ಯರ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ ಜನ್ಮವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಡಾ ಬನ್ನಂಜೆ ಗೋವಿಂದಪಂಡಿತಾಚಾರ್ಯರು ಈ ದೇಶ ಕಂಡ ಪ್ರಸಿದ್ದ ಸಂಸ್ಕೃತ ಮತ್ತು ಕನ್ನಡದ ಓರ್ವ ಶ್ರೇಷ್ಠ ವಿದ್ವಾಂಸರು. ಸಂಶೋಧಕ, ಪ್ರವಚನಕಾರರಾಗಿ ಲೋಕ ಪ್ರಸಿದ್ದಿ ಪಡೆದಿದ್ದಾರೆ. ಬಹಳ ವರ್ಷ ಪತ್ರಕರ್ತರೂ, ಪತ್ರಿಕೋದ್ಯಮಿಗಳಾಗಿ ಸೇವೆ ಸಲ್ಲಿಸಿದ ಆಚಾರ್ಯರು ವೇದ ವೇದಾಂತ ಉಪನಿಷತ್ತು ಪುರಾಣ ರಾಮಾಯಣ ಮಹಾಭಾರತ ಭಗವದ್ಗೀತೆ ಮೊದಲಾದ ಭಾರತೀಯ ಅಧ್ಯಾತ್ಮಿಕ ಸಾಹಿತ್ಯಗಳ ಬಗ್ಗೆ ಸಂಶೋಧನೆ, ಅಧ್ಯಯನ ಮಾಡಿದ್ದಾರೆ.
350ಕ್ಕೂ ಅಧಿಕ ಶ್ರೇಷ್ಠ ಕೃತಿಗಳ ರಚನೆ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ಅವರು ಸಾವಿರಾರು ಆಧ್ಯಾತ್ಮಿಕ ಉಪನ್ಯಾಸಗಳನ್ನು ಮಾಡಿದ್ದು, ಈಗಲೂ 23000 ಗಂಟೆಗಳ ಉಪನ್ಯಾಸಗಳ ಆಡಿಯೋ ವಿಡಿಯೋ ದಾಖಲೆಗಳು ಲಭ್ಯವಿರುವುದು ಪ್ರಶಂಸನೀಯ. ಅವರ ಎಲ್ಲ ಸಾಧನೆಗಳಿಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ, ಕೆಲವು ವಿವಿಗಳಿಂದ ಗೌರವ ಡಾಕ್ಟರೇಟ್, ಅನೇಕ ಮಠ ಸಂಸ್ಥಾನಗಳಿಂದ ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ ಮೊದಲಾದ ಬಿರುದು ಸನ್ಮಾನಗಳು ಲಭಿಸಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ. ಪ್ರಸನ್ನಾಚಾರ್ಯ, ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥರಾದ ಬಾಲಾಜಿ ರಾಘವೇಂದ್ರ ಆಚಾರ್ಯ, ವಿನಯಭೂಷಣ ಆಚಾರ್ಯ ಬನ್ನಂಜೆ, ಡಾ. ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ ಜನ್ಮವರ್ಧಂತ್ಯುತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ, ಕೋಶಾಧಿಕಾರಿ ಕೆ. ಪ್ರಸಾದ್ ಉಪಾಧ್ಯಾಯ ಉಪಸ್ಥಿತರಿದ್ದರು.












