ಉಡುಪಿ: ಎಲ್ ವಿಟಿ ಫ್ರೆಂಡ್ಸ್ ಪುತ್ತೂರು ಇದರ ಆಶ್ರಯದಲ್ಲಿ ಮೊತ್ತ ಮೊದಲ ಬಾರಿಗೆ ವೈಶ್ಯವಾಣಿ ಸಮಾಜ ಬಾಂಧವರಿಗೆ ಅಂತರ್ ಜಿಲ್ಲಾಮಟ್ಟದ ಕ್ರೀಡಾಕೂಟ “ವೈಶ್ಯವಾಣಿ ಒಲಂಪಿಕ್ಸ್- 2025” ಅನ್ನು ಇದೇ ಎ.25,26 ಮತ್ತು 27ರಂದು ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣ ಹಾಗೂ ಎಂಜಿಎಂ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಲಕ್ಷ್ಮೀಕಾಂತ್ ಶೇಟ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎ.25ರಂದು ಬೆಳಗ್ಗೆ 9.30ಕ್ಕೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಶಾಸಕರಾದ ಯಶ್‌ಪಾಲ್ ಎ.ಸುವರ್ಣ, ಗುರುರಾಜ್ ಗಂಟಿಹೊಳೆ, ಎಲ್ ವಿಟಿ ದೇವಸ್ಥಾನದ ಅರ್ಚಕ ಅನಂತ ಭಟ್ ಭಾಗವಹಿಸಲಿದ್ದಾರೆ. ಎ.25ರಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಶಟಲ್ ಬ್ಯಾಡ್ಮಿಂಟನ್, ಈಜು ಸ್ಪರ್ಧೆಗಳು ನಡೆಯಲಿವೆ. ಎ. 26ರಂದು ಎಂಜಿಎಂ ಕಾಲೇಜು ಮೈದಾನದಲ್ಲಿ ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ, ಗುಡ್ಡಗಾಡು ಓಟ ಹಾಗೂ 25ರಿಂದ 27ರವರೆಗೆ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಎ.27ರಂದು ಎಂಜಿಎಂ ಕಾಲೇಜು ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಭರತ್ ಶೇಟ್, ಸಚಿನ್ ನಾಯ್ಕ, ಗೌರವಾಧ್ಯಕ್ಷ ವಾಸುದೇವ, ಸಾಂಸ್ಕೃತಿಕ ಕಾರ್ಯದರ್ಶಿ ಧನುಷ್ ಗಾಂಸ್, ಕೋಶಾಧಿಕಾರಿ ಸಚಿನ್ ಶೇಟ್, ಸದಸ್ಯರಾದ ಅಜಯ್, ಪ್ರದೀಪ್ ಇದ್ದರು.












