ಉಡುಪಿ: ವಾಹನ ತೆರಿಗೆ ಪಾವತಿಸದೆ, ಅಧ್ಯರ್ಪಣದಿಂದ ಬಿಡುಗಡೆಗೊಳಿಸಿಕೊಳ್ಳದೆ ಜೂನ್ 28ರಂದು ಉಡುಪಿಯಿಂದ ಹೆಬ್ರಿ ಕಡೆಗೆ ಖಾಸಗಿ ಕಂಪನಿಯ ನೌಕರರನ್ನು ಸಾರ್ವಜನಿಕ ರಸ್ತೆಯ ಮೇಲೆ ಕೊಂಡೊಯ್ಯುತ್ತಿದ್ದ KA51-B9646 ನೋಂದಣಿ ಸಂಖ್ಯೆಯ ಎಸ್ ವಿಟಿ ಖಾಸಗಿ ಬಸ್ ಅನ್ನು ಆರ್ ಟಿಒ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಆರ್ ಟಿಒ ಕಾನೂನು ಉಲ್ಲಂಘಿಸಿ ಬಸ್ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಪಾಸಣೆ ನಡೆಸಿದ ಅಧಿಕಾರಿಗಳು ಸದರಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು, ವಾಹನದಲ್ಲಿದ್ದ ಪ್ರಯಾಣಿಕರನ್ನು ಅವರವರ ನಿವಾಸಕ್ಕೆ ಬಿಟ್ಟು ತದನಂತರ ಕಚೇರಿಯ ಆವರಣದಲ್ಲಿ ನಿಲ್ಲಿಸಿ, ಕಾನೂನು ರೀತಿಯ ಕ್ರಮ ಜರುಗಿಸಿದ್ದಾರೆ.
ಸಾರಿಗೆ ಆಯುಕ್ತರ ಆದೇಶ ಹಾಗೂ ಮೋಟಾರ್ ವಾಹನ ಕಾಯ್ದೆ ಮತ್ತು ನಿಯಮಯಾನುಸಾರ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನಗಳನ್ನು (ಬಸ್, ಮ್ಯಾಕ್ಸಿಕ್ಯಾಬ್ ಮತ್ತು ಟ್ಯಾಕ್ಸಿ ) ಅನುಪಯುಕ್ತತೆಗಾಗಿ ವಾಹನದ ಮೂಲ ದಾಖಲಾತಿಗಳೊಂದಿಗೆ ಆರ್ ಟಿಒ ಕಚೇರಿಗೆ ಒಪ್ಪಿಸಿ ಅನುಪಯುಕ್ತತೆಯಲ್ಲಿದೆ ಎಂದು ಘೋಷಿಸಲ್ಪಟ್ಟಿದ್ದಾರೆ.
ಅಂತಹ ವಾಹನಗಳು ಮುಂಗಡ ತೆರಿಗೆ ಪಾವತಿಸಿ, ಅದ್ಯಾರ್ಪಣೆ (ಅನುಪಯುಕ್ತತೆ)ಯಿಂದ ಬಿಡುಗಡೆಗೊಳಿಸಿಕೊಂಡ ಬಳಿಕವೇ ವಾಹನಗಳನ್ನು ಸಾರ್ವಜನಿಕರ ಸೇವೆಗೆ ಬಳಸಬೇಕು. ಒಂದು ವೇಳೆ ಆರ್ ಟಿಓದ ಅನುಮತಿ ಇಲ್ಲದೆ ಉಪಯೋಗಿಸಿದರೆ ಭಾರೀ ದಂಡದೊಂದಿಗೆ ಉಳಿದಿರುವ ತೆರಿಗೆಯನ್ನು ಕಡ್ಡಾಯವಾಗಿ ಕಟ್ಟಬೇಕಾಗುತ್ತದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.

















