ಕೊರೊನಾ ಭೀತಿ: ಬ್ರಹ್ಮಾವರದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಬ್ರಹ್ಮಾವರ: ಕೊರೊನಾ ಸೋಂಕು ತಗುಲಿರಬಹುದೆಂಬ ಭೀತಿಯಿಂದ ವ್ಯಕ್ತಿಯೊಬ್ಬ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ನರ್ನಾಡಿನಲ್ಲಿ ಇಂದು‌ ಮುಂಜಾನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಉಪ್ಪೂರು ನರ್ನಾಡಿನ ಗೋಪಾಲಕೃಷ್ಣ (56) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಕೊರೊನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಮೃತ ವ್ಯಕ್ತಿ ಮಧ್ಯರಾತ್ರಿವರೆಗೂ ಕುಟುಂಬದ ಸದ್ಯಸರ ಬಳಿ ಕೊರೊನಾ ಹರಡುತ್ತಿರುವ ಆತಂಕದ ವಿಚಾರವಾಗಿ ಮಾತನಾಡಿ, ಬೆಳಗಿನ ಜಾವ‌ ಮನೆಯ ಹಿಂಬದಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಪಾಲಕೃಷ್ಣ ಈಚೆಗೆ ವಾಟ್ಸ್‌ಆ್ಯಪ್‌ ಹಾಗೂ ಜಾಲತಾಣಗಳಲ್ಲಿ ಬರುತ್ತಿದ್ದ ಕೊರೊನಾ ಸಂಬಂಧಿತ ಸುದ್ದಿಗಳನ್ನು ಅತಿಯಾಗಿ ನೋಡಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ
ಮೃತ ವ್ಯಕ್ತಿಯಲ್ಲಿ ಸೋಂಕು ಲಕ್ಷಣಗಳು ಇರಲಿಲ್ಲ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.