ಸಮರ್ಪಣಾಭಾವದಿಂದ ನೀಡಿದ ಪ್ರಶಸ್ತಿಗೆ ವಿಶೇಷ‌ ಮಹತ್ವವಿದೆ: ವಿದ್ಯಾಸಾಗರ ಸ್ವಾಮೀಜಿ

ಉಡುಪಿ: ಶಿಫಾರಸ್ಸು ಅಥವಾ ಒತ್ತಡ ತಂದು ಪಡೆಯುವ ಪ್ರಶಸ್ತಿಗಿಂತಲೂ ಸಮರ್ಪಣಾ ಭಾವದಿಂದ ನೀಡುವ ಪ್ರಶಸ್ತಿಗೆ ವಿಶೇಷ ಮಹತ್ವವಿದೆ ಎಂದು ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ ಹೇಳಿದರು.
ಉಡುಪಿ ರಥಬೀದಿ ಶ್ರೀ ರಾಘವೇಂದ್ರ ಮಠದ ಮಂತ್ರಾಲಯ ಸಭಾಭಾವನದಲ್ಲಿ ನಡೆದ ರಾಜ್ಯಮಟ್ಟದ ‘ಉಪಾಧ್ಯಾಯ ಸಮ್ಮಾನ್‌’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಶಸ್ತಿ ಕೊಟ್ಟವರಿಗೂ ಪಡೆದವರಿಗೂ ಸಮಾಜದಲ್ಲಿ ನಿಜವಾದ ಗೌರವ ಸಿಗುತ್ತದೆ. ಆ ದೃಷ್ಟಿಯಿಂದ ನೋಡುವಾಗ ಉಪಾಧ್ಯಾಯ ಮೂಡುಬೆಳ್ಳೆ ಕಲಾ ಪ್ರತಿಷ್ಠಾನ ನೀಡುವ ಪ್ರಶಸ್ತಿ ನಿಜವಾಗಲೂ ಶ್ರೇಷ್ಠವಾಗಿದೆ ಎಂದರು.
ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ಕೇಂಜ ಶ್ರೀಧರ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಸದಸ್ಯ ರಾಘವೇಂದ್ರ ಕೆ. ಅಮೀನ್‌ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚಿತ್ರಕಲಾವಿದ ಬಿ.ಜಿ. ಅವುಟಿ, ಸಾಹಿತಿ ಡಾ. ಜನಾರ್ದನ ಭಟ್‌ ಬೆಳ್ಮಣ್‌, ರಂಗಭೂಮಿ ಕಲಾವಿದ ಭೋಜರಾಜ್‌ ವಾಮಂಜೂರು, ವಕೀಲ ಸಂತೋಷ್‌ ಕುಮಾರ್‌ ಬೆಳ್ಳೆ, ಹಾಗೂ ಗಾಯಕಿ ಸರೋಜ ಆರ್‌. ಆಚಾರ್ಯ ಅವರಿಗೆ ಉಪಾಧ್ಯಾಯ ಸಮ್ಮಾನ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೊಗವೀರ ಸಮಾಜದ ಮುಖಂಡ ಜನಾರ್ದನ ಕಾಂಚನ್‌, ನಿವೃತ್ತ ಬ್ಯಾಂಕ್‌ ಅಧಿಕಾರಿ ಹರಿ ರಾವ್‌‌ ಮಂಗಳೂರು, ಚಿತ್ರಕಲಾವಿದ ರಮೇಶ್‌ ಬಂಟಕಲ್‌, ಕಲಾವಿಮರ್ಶಕ ದಿನಮಣಿ ಶಾಸ್ತ್ರೀ ಬ್ರಹ್ಮಾವರ, ಕಲಾಶಿಕ್ಷಕ ಪ್ರಶಾಂತ್‌ ಕುಮಾರ್‌, ವಾದ್ಯ ಸಂಗೀತ ಕಲಾವಿದ ಶಮ್ಮಿ ಗಫೂರ್‌ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು.
ಮೂಡುಬೆಳ್ಳೆ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಬೆಳ್ಳೆ ಮಾಧವ ಉಪಾಧ್ಯಾಯ,‌ ಕಾರ್ಯದರ್ಶಿ ಪ್ರದ್ಯುಮ್ನ ಉಪಾಧ್ಯಾಯ, ಕೋಶಾಧಿಕಾರಿ ಪ್ರಸನ್ನಲಕ್ಷ್ಮೀ ಉಪಾಧ್ಯಾಯ‌ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಉಪಾಧ್ಯಾಯ ಮೂಡುಬೆಳ್ಳೆ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಜಂಟಿ ಕಾರ್ಯದರ್ಶಿ ರಮ್ಯಶ್ರೀ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಮೋದನ ಉಪಾಧ್ಯಾಯ ವಂದಿಸಿದರು.