ಸೆ. 22ರಿಂದ ಅ.2ರ ವರೆಗೆ “ಉಡುಪಿ-ಉಚ್ಚಿಲ ದಸರಾ-2025”

ಉಡುಪಿ: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀಕ್ಷೇತ್ರ ಉಚ್ಚಿಲ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಾಲ್ಕನೇ ವರ್ಷದ “ಉಡುಪಿ-ಉಚ್ಚಿಲ ದಸರಾ-2025” ಸೆ. 22ರಿಂದ ಅ. 2ರ ವರೆಗೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ ಹೇಳಿದರು.

ಉಚ್ಚಿಲ ಮೊಗವೀರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು.

ಸೆ.22ರಂದು ಬೆಳಿಗ್ಗೆ 9ಕ್ಕೆ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಶ್ರೀ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು. ಸೆ.22ರಂದು ಬೆಳಿಗ್ಗೆ 10ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದರು.

ಸೆ.21ರಂದು ಸಂಜೆ 6.30ಕ್ಕೆ ಪಡುಬಿದ್ರಿಯಿಂದ ಕಾಪು ಸಮುದ್ರ ತೀರದವರೆಗೆ ಮಾಡಲಾಗಿರುವ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ನಡೆಯಲಿದೆ. ದಸರಾ ಮಹೋತ್ಸವ ವಿಶೇಷ ಆಕರ್ಷಣೆಯಾಗಿ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳ ಪ್ರದರ್ಶನ, ಮರಳು ಕಲಾಕೃತಿ, ಕುಬ್ಜ ಸಹೋದರರ ಕಲಾಕೃತಿ, ಜನಜಾಗೃತಿ ಕಲಾಕೃತಿ, ವಿಶೇಷ ಶಾಲೆಯ ಮಕ್ಕಳ ಕಲಾಕೃತಿ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆಯಲಿವೆ. ಅಲ್ಲದೆ, ಈ ಬಾರಿ ವಿಶೇಷವಾಗಿ ಸೀರೆ ಮೇಳವನ್ನು ಆಯೋಜನೆ ಮಾಡಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳು:
ಪ್ರತಿದಿನ ಬೆಳಿಗ್ಗೆ 9ರಿಂದ 12ಗಂಟೆಯವರೆಗೆ ಚಂಡಿಕಾಹೋಮ, ಮಧ್ಯಾಹ್ನ 12ರಿಂದ 3ಗಂಟೆಯವರೆಗೆ ಅನ್ನಸಂತರ್ಪಣೆ, ಸಂಜೆ 6.30ರಿಂದ ಭಕ್ತರಿಗೆ ಪ್ರಸಾದ ವಿತರಣೆ, ಸಂಜೆ 5.30ರಿಂದ 6.15ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಬೆಳಿಗ್ಗೆ 10ರಿಂದ ಭಜನಾ ಕಾರ್ಯಕ್ರಮ, ಸಂಜೆ 5ರಿಂದ 5.45ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8.30ರಿಂದ ಕಲ್ಪೋಕ್ತ ಪೂಜೆ ನೆರವೇರಲಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:
ಸೆ.22ರಂದು ಮಧ್ಯಾಹ್ನ 12.30ರಿಂದ 2.15ರವರೆಗೆ ಧರ್ಮರಾಜ್ ಎರ್ಮಾಳ್ ಮತ್ತು ಬಳಗ ಅವರಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ಸಂಜೆ 7ರಿಂದ ಖ್ಯಾತ ಹಿನ್ನಲೆ ಗಾಯಕ, ನಟ, ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದಿಂದ “ಗುರುಕಿರಣ್ ನೈಟ್ಸ್” ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸೆ.23ರಂದು ಮಧ್ಯಾಹ್ನ 12.30ರಿಂದ 2.15ರವರೆಗೆ ಅಮ್ಮ ಡ್ರೀಮ್ಸ್ ಮೆಲೋಡಿಸ್ ಅಂಬಲಪಾಡಿ ಅವರಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ಸಂಜೆ 6.30ರಿಂದ ಅನ್ನಪೂರ್ಣ ರಿತೇಶ್ ನಿರ್ದೇಶನದ “ಶಿವಪ್ರಣಾಮ್” ತಂಡದಿಂದ ನೃತ್ಯ ವೈವಿಧ್ಯ, ರಾತ್ರಿ 8ಗಂಟೆಯಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರು ಹಾಗೂ ಶ್ವೇತಾ ಅರೆಹೊಳೆ ನಿರ್ದೇಶನದ “ ಕೊಲ್ಲೂರು ಮಹಾತ್ಮೆ” ನೃತ್ಯ ರೂಪಕ ಹಾಗೂ ನೃತ್ಯ ವೈವಿಧ್ಯ ಜರುಗಲಿದೆ.

ಸೆ.24ರಂದು ಮಧ್ಯಾಹ್ನ 12.30ರಿಂದ 2ರವರೆಗೆ ಸೃಷ್ಠಿ ಸಂಗೀತ ಕಲಾಕೇಂದ್ರದಿಂದ ‘ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ’, ಸಂಜೆ 6.30ರಿಂದ 7.30ರವರೆಗೆ ಮೊಗವೀರ ಯುವ ಸಂಘಟನೆಯ ಸದಸ್ಯರಿಂದ “ಮನೋರಂಜನಾ ಕಾಯಕ್ರಮ” ರಾತ್ರಿ 7.30ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ನವ ಯಕ್ಷಗಾನ ಭಾಗವತರಿಂದ “ನಾದ ವೈಕುಂಠ” ಕಾರ್ಯಕ್ರಮ ನಡೆಯಲಿದೆ.

ಸೆ. 25ರಂದು ಮಧ್ಯಾಹ್ನ 12.30ರಿಂದ 2.30ಯವರೆಗೆ ಸ್ವಪ್ನರಾಜ್ ಚಿಟ್ಪಾಡಿ ಮತ್ತು ಬಳಗದವರಿಂದ “ಸ್ವರಾಂಜಲಿ ಮ್ಯೂಸಿಕ್ ಉಡುಪಿ” ತಂಡದವರಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ಸಂಜೆ 6.30ರಿಂದ 8ಗಂಟೆಯವರೆಗೆ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಗಂಟೆಯಿಂದ ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ ಐತಿಹಾಸಿಕ ನಾಟಕ “ಛತ್ರಪತಿ ಶಿವಾಜಿ” (ದೇವಸ್ಥಾನದ ಮುಂಭಾಗದ ೨ನೇ ವೇದಿಕೆಯಲ್ಲಿ).

ಸೆ. 26ರಂದು ಮಧ್ಯಾಹ್ನ 1.30ರಿಂದ 3.30ರವರೆಗೆ ಕಲಾವತಿ ದಯಾನಂದ್ ಕಲಾ ಸಿಂಧೂ ಸಂಗೀತ ಬಳಗದಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 3.30ರಿಂದ 4.45ರವರೆಗೆ ಅನಿಕಾ ಮತ್ತು ಅನುಷ್ಕಾ ಸಹೋದರಿಯರು “ಭರತನಾಟ್ಯ” ನೃತ್ಯ ಪ್ರಸ್ತುತಪಡಿಸಲಿದ್ದಾರೆ. ಸಂಜೆ 6.30ರಿಂದ 8ಗಂಟೆಯವರೆಗೆ ಡಾ. ಮೀನಾಕ್ಷಿ ರಾಜು ಶ್ರೀಯಾನ್ ನಿರ್ದೇಶನದಲ್ಲಿ ಮುಂಬೈಯ “ಅರುಣೋದಯ ಕಲಾನಿಕೇತನ ತಂಡದಿಂದ ನೃತ್ಯ ವೈವಿಧ್ಯ, ರಾತ್ರಿ 8ಗಂಟೆಯಿಂದ ದೇವದಾಸ್ ಕಾಪಿಕಾಡ್ ನಿರ್ದೇಶನದ – “ಪುದರ್ ದೀತಿಜಿ” ನಾಟಕ ಪ್ರದರ್ಶನಗೊಳ್ಳಲಿದೆ (ದೇವಸ್ಥಾನದ ಮುಂಭಾಗದ 2ನೇ ವೇದಿಕೆಯಲ್ಲಿ) ಎಂದು ಮಾಹಿತಿ ನೀಡಿದರು.

ಸೆ.27ರಂದು ಮಧ್ಯಾಹ್ನ 11.30ರಿಂದ 1ಗಂಟೆಯವರೆಗೆ ಹೇಮಚಂದ್ರ ಎರ್ಮಾಳ್ ಮತ್ತು ಬಳಗದವರಿಂದ “ನಾದ ಲಹರಿ ಮ್ಯೂಸಿಕಲ್ಸ್” ಅವರಿಂದ ಭಕ್ತಿ ಗೀತಾಂಜಲಿ ಕಾರ್ಯಕ್ರಮ, ಸಂಜೆ 6.30ರಿಂದ 8ಗಂಟೆಯವರೆಗೆ ಶ್ರೀಕ್ಷೇತ್ರದ ರಥಬೀದಿಯ ಸುತ್ತ ಸಾರ್ವಜನಿಕರಿಂದ ಸಾಮೂಹಿಕ ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಸೆ. 28ರಂದು ಮಧ್ಯಾಹ್ನ 12ಗಂಟೆಯಿಂದ 2ಗಂಟೆಯವರೆಗೆ ರಾಗಸಂಗಮ- ಗಣೇಶ್ ಎರ್ಮಾಳ್ ಮತ್ತು ಬಳಗದವರಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 3.45ರಿಂದ 4.45ರವರೆಗೆ ವಿದುಷಿ ದೀಕ್ಷಾ ವಿ. ಚಾಂತಾರು ಅವರಿಂದ ನೃತ್ಯ, ಸಂಜೆ 6.30ರಿಂದ 8ಗಂಟೆಯವರೆಗೆ ಉಡುಪಿ ಮತ್ತು ದ.ಕ. ಜಿಲ್ಲಾ ವ್ಯಾಪ್ತಿಯ ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಶ್ರೀ ಕ್ಷೇತ್ರದ ರಥಬೀದಿಯ ಸುತ್ತ ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮ ಜರುಗಲಿದೆ.

ಸೆ. 29ರಂದು ಮಧ್ಯಾಹ್ನ 12ಗಂಟೆಯಿಂದ 2ಗಂಟೆಯಿಂದ ಜನಾರ್ಧನ್ ಉಡುಪಿ ಮತ್ತು ಬಳಗದವರಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 3.45ರಿಂದ 4.45ರವರೆಗೆ ಜೋಗಿ ಸಮಾಜ ಸುಧಾರಕ ಸಂಘದವರಿಂದ ನೃತ್ಯ ಕಾರ್ಯಕ್ರಮ, ಸಂಜೆ 6.30ರಿಂದ 7.30ರವರೆಗೆ ಪ್ರತಿಭಾ ಎ ಕುಮಾರ್ ಅವರ ಶಿಷ್ಯರಿಂದ ನೃತ್ಯ ಮಾಧುರ್ಯ ತಂಡದವರಿಂದ “ಭರತನಾಟ್ಯ ಮತ್ತು ಜಾನಪದ ನೃತ್ಯ”, ರಾತ್ರಿ 8ರಿಂದ 10.30ರವರೆಗೆ ನಾಟ್ಯ ನಿಲಯಂ ಮಂಜೇಶ್ವರ ಲೈವ್ ಹಿನ್ನಲೆ ಸಂಗೀತ ವಾದನದೊಂದಿಗೆ “ನೃತ್ಯ ವೈವಿಧ್ಯ” ನಡೆಯಲಿದೆ.

ಸೆ. 30ರಿಂದ ಮಧ್ಯಾಹ್ನ 12.30ರಿಂದ 2.30ರವರೆಗೆ ಶೃತಿ ಮ್ಯೂಸಿಕಲ್ಸ್ – ಚಂದ್ರಕಾಂತ್ ಸುವರ್ಣ ಮತ್ತು ಬಳಗದವರಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 2.30ರಿಂದ 3.30ರವರೆಗೆ ವಿದುಷಿ ರೇಖಾ ಸುಬ್ರಮಣ್ಯ ಅವರಿಂದ “ವೀಣಾವಾದನ ಕಾರ್ಯಕ್ರಮ”, ರಾತ್ರಿ 6.30ರಿಂದ 8ಗಂಟೆಯವರೆಗೆ ವಿದುಷಿ ಪಾವನ ನಿರ್ದೇಶನದ ಶಾರದಾ ನೃತ್ಯಾಲಯದಿಂದ ನೃತ್ಯ ವೈವಿಧ್ಯ, ರಾತ್ರಿ 8ರಿಂದ 10.30ರವರೆಗೆ ಉರ್ವ ಚಿಲಿಂಬಿ ಸಾಯಿಶಕ್ತಿ ಕಲಾಬಳಗದಿಂದ “ಜೋಡು ಜೀಟಿಗೆ” ತುಳು ಜನಪದ ನಾಟಕ (ದೇವಸ್ಥಾನದ ಮುಂಭಾಗದ ೨ನೇ ವೇದಿಕೆಯಲ್ಲಿ) ನಡೆಯಲಿದೆ.

ಅ.1ರಂದು ಮಧ್ಯಾಹ್ನ 3.30ರಿಂದ ಸಂಜೆ 4.45ರವರೆಗೆ ಅಕ್ಷತಾ ದೇವಾಡಿಗ ಬೈಲೂರು ಅವರಿಂದ ಸ್ಯಾಕ್ಸೋಫೋನ್ ವಾದನ, ಸಂಜೆ 6.30ರಿಂದ 7.45ರವರೆಗೆ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಗಂಟೆಯಿಂದ “Swara the band” ರಾಜ್ಯದ ರಿಯಾಲಿಟಿ ಶೋ ಖ್ಯಾತಿಯ ಯುವ ಗಾಯಕ ಗಾಯಕಿಯರಿಂದ ಸಂಗೀತ ಕಾರ್ಯಕ್ರಮ.

ಅ.2ರಂದು ಮಧ್ಯಾಹ್ನ 12ರಿಂದ 2ಗಂಟೆಯವರೆಗೆ Zee ಸರಿಗಮಪ ಖ್ಯಾತಿಯ ಯಶವಂತ್ ಎಂ.ಜಿ. ಮತ್ತು ಬಳಗದವರಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಅ.2ಕ್ಕೆ ಭವ್ಯ ಶೋಭಾಯಾತ್ರೆ:
ಅ.2ರಂದು ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. ಶ್ರೀ ಕ್ಷೇತ್ರದಿಂದ ಸಂಜೆ 4.30ಕ್ಕೆ ಶೋಭಾಯಾತ್ರೆಯು ಹೊರಟು ಎರ್ಮಾಳ್ ತನಕ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗಿ ಅಲ್ಲಿಂದ ತಿರುಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಉಚ್ಚಿಲ- ಮೂಳೂರು, ಕೊಪ್ಪಲಂಗಡಿಯವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ವಿಸರ್ಜನೆ ಮಾಡಲಾಗುವುದು.

ಈ ಸಂದರ್ಭದಲ್ಲಿ ಕಾಪು ಬೀಚ್‌ನಲ್ಲಿ ಗಂಗಾರತಿ, ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ, ಹಾಗೂ ನವದುರ್ಗೆಯರಿಗೆ, ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಕೂಡ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯಿಂದ ಆಗಮಿಸುವ ಅರ್ಚಕರಿಂದ ಕಾಶಿಯ ಗಂಗಾ ನದಿಯ ತೀರದಲ್ಲಿ ನಡೆಯುವ ರೀತಿಯಲ್ಲಿ ನವದುರ್ಗೆಯರು, ಶ್ರೀ ಶಾರದಾಮಾತೆ ಹಾಗೂ ಸಮುದ್ರರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ರಾತ್ರಿ 7.30ರಿಂದ ಕಾಪು ದೀಪಸ್ತಂಭದ ಬಳಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ದಸರಾ ಉತ್ಸವದ ಪ್ರಯುಕ್ತ ನಡೆಯುವ ಸ್ಪರ್ಧೆಗಳು:
ಸೆ. 25ರಂದು ಮಧ್ಯಾಹ್ನ 2ರಿಂದ ಸಂಜೆ 5ಗಂಟೆಯವರೆಗೆ ರಂಗೋಲಿ ಸ್ಪರ್ಧೆ(ಪುರುಷರ ವಿಭಾಗ ಮತ್ತು ಮಹಿಳೆಯರ ವಿಭಾಗ) (ಸ್ಥಳ: ಮೊಗವೀರ ಭವನ, ಉಚ್ಚಿಲ).

26ರಂದು ಬೆಳಿಗ್ಗೆ 10.30ರಿಂದ 1.30ರ ತನಕ ಮುದ್ದು ಮಕ್ಕಳಿಗಾಗಿ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ (ವಯೋಮಿತಿ 3 ವರ್ಷದಿಂದ 6 ವರ್ಷ).

ಸೆ. 27ರಂದು ಬೆಳಿಗ್ಗೆ 10ರಿಂದ 2.30ರವರೆಗೆ ಚಿತ್ರಕಲಾ ಸ್ಪರ್ಧೆ, ಸ್ಥಳ: ಮೊಗವೀರ ಭವನ ಉಚ್ಚಿಲ, ಮಧ್ಯಾಹ್ನ 1ರಿಂದ 4.30ರ ತನಕ ಮಹಿಳೆಯರ ಹುಲಿಕುಣಿತ ಸ್ಪರ್ಧೆ, ರಾತ್ರಿ ಘಂಟೆ 8ರಿಂದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ, ಸೆ. 25ರಂದು ಬೆಳಿಗ್ಗೆ 8ರಿಂದ ಕುಸ್ತಿ ಸ್ಪರ್ಧೆ(ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಸ್ಪರ್ಧೆ) ಪುರುಷರ ವಿಭಾಗ ಮತ್ತು ಮಹಿಳೆಯರ ವಿಭಾಗ (ದೇವಸ್ಥಾನದ ಮುಂಭಾಗದ 2ನೇ ವೇದಿಕೆಯಲ್ಲಿ), ರಾತ್ರಿ 8ರಿಂದ 10.30 “ನೃತ್ಯ ವೈಭವ” ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ನಡೆಯಲಿದೆ.

ದಸರಾ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಂದರ್ಶನ ಮಾಡಲು ಮಂಗಳೂರು ಕಡೆಯಿಂದ ಬರುವ ಭಕ್ತಾದಿಗಳ ವಾಹನಗಳು ಸರಸ್ವತಿ ಶಾಲೆಯ ಮೈದಾನದಲ್ಲಿ ಹಾಗೂ ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಮಹಾಲಕ್ಷ್ಮೀ ಇಂಗ್ಲೀಷ್ ಮೀಡಿಯಂ ಶಾಲೆಯ ಪಕ್ಕದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ‌. ಭಕ್ತರಿಗೆ ಸುಲಭವಾಗಿ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲು ಮತ್ತು ಮಹಾಅನ್ನಸಂತರ್ಪಣೆ ಕಾರ್ಯಕ್ಕೆ ಸಹಕರಿಸಲು ಪ್ರತಿದಿನ 1500 ಸ್ವಯಂಸೇವಕರು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಹಿಳಾ ತಂಡಗಳು, ಸ್ಕೌಟ್ಸ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ. ಭಕ್ತಾದಿಗಳು 11 ದಿನಗಳ ಕಾಲವೂ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಸುವರ್ಣ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್‌ಕುಮಾರ್‌ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ  ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್‌, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉಷಾ ರಾಣಿ ಮಂಗಳೂರು, ಮನೋಜ್ ಕಾಂಚನ್, ಸುಜಿತ್ ಸಾಲ್ಯಾನ್, ಸತೀಶ್ ಕಾಂಚನ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ ಮತ್ತು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ ಅಮೀನ್‌ ಪಡುಕರೆ ಉಪಸ್ಥಿತರಿದ್ದರು.