ಉಡುಪಿ: ಇಂದ್ರಾಳಿ ರಸ್ತೆ ಬದಿಯಲ್ಲಿ ಜೋಳದ ತೆನೆ ಮಾರುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿ ತಾತ್ಕಾಲಿಕವಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಸಾರ್ಜನಿಕರಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಬಂದ ದೂರಿನಂತೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರಸ್ತೆ ಬದಿಯಲ್ಲಿ ಜೋಳದ ತೆನೆ ಮಾರುತ್ತಿದ್ದ ಬಾಗಲಕೋಟೆ ಮೂಲದ ವಲಸೆ ಕಾರ್ಮಿಕರ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಈ ಮಕ್ಕಳನ್ನು ರಕ್ಷಿಸಿ ವಿಚಾರಿಸಿದಾಗ ನಾವು ಇಂದ್ರಾಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮಕ್ಕಳ ತಾಯಿಯೂ ಇದೇ ವೃತ್ತಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಆದರೆ ತಾಯಿ ಮಕ್ಕಳ ಬಗ್ಗೆ ಕಾಳಜಿ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದು, ಈ ಕೆಲಸ ಮಾಡುವಂತೆ ಪ್ರೇರೆಪಿಸುತ್ತಿದ್ದಾರೆ ಎಂದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್,
ಸಮಾಜ ಕಾರ್ಯಕರ್ತೆ ಸುರಕ್ಷಾ ಔಟ್ ರೀಚ್ ವರ್ಕರ್ ಸುನಂದ ಪಾಲ್ಗೊಂಡಿದ್ದರು.