ಉಡುಪಿ: ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ವ್ಯಕ್ತಿಗೆ ಬೆದರಿಕೆ ಹಾಕಿ, ಹಂತ ಹಂತವಾಗಿ ₹42.97 ಲಕ್ಷ ಹಣ ಪಡೆದು ಹಿಂದಿರುಗಿಸದೆ ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೈಂದೂರು ತಾಲೂಕಿನ ಯಡ್ತರೆ ಮಯ್ಯಾಡಿ ಮೂಲದ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ನಾಗರತ್ನ ಎಚ್. (42) ಹಾಗೂ ಕಾರ್ಕಳ ತಾಲೂಕಿನ ಮಿಯಾರು ಮೂಲದ ಬೆಂಗಳೂರಿನ ಮೆಜೆಸ್ಟಿಕ್ ನಿವಾಸಿ ಹೇಮಂತ್ (41) ಎಂದು ಗುರುತಿಸಲಾಗಿದೆ.
ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ್ ಕೆ. ಅವರು ವಿವಾಹವಾಗಲು ವಧುವಿನ ಹುಡುಕಾಟದಲ್ಲಿದ್ದರು.
2024ರ ಜನವರಿಯಲ್ಲಿ ಕನ್ನಡ ಜೋಡಿ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಬೆಂಗಳೂರಿನ ಬಸವೇಶ್ವರ ನಗರದ ಶಾಲೆಯೊಂದರಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ ನಾಗರತ್ನ ಅವರ ಪರಿಚಯವಾಗಿತ್ತು. ಆಕೆ ಪ್ರದೀಪ್ ಅವರೊಂದಿಗೆ ವಿವಾಹದ ಪ್ರಸ್ತಾಪ ಮಾಡಿದ್ದಳು. ಆದರೆ, ಪ್ರದೀಪ್ ತನ್ನ ಜಾತಿಯ ಯುವತಿಯನ್ನೇ ವಿವಾಹವಾಗುವುದಾಗಿ ತಿಳಿಸಿ ಪ್ರಸ್ತಾಪವನ್ನು ನಿರಾಕರಿಸಿದ್ದರು.
ಇದಾದ ಬಳಿಕ ನಾಗರತ್ನ ಪ್ರದೀಪ್ ಅವರಿಗೆ ಕರೆ ಹಾಗೂ ಸಂದೇಶಗಳನ್ನು ಕಳುಹಿಸಿ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಾ ಹಂತ ಹಂತವಾಗಿ ಹಣ ಪಡೆದುಕೊಳ್ಳುತ್ತಿದ್ದಳು ಎನ್ನಲಾಗಿದೆ.
ತನ್ನ ಬ್ಯಾಂಕ್ ಖಾತೆಯಲ್ಲದೆ, ಸಹೋದ್ಯೋಗಿ ಹೇಮಂತ್ ಕರ್ಕೇರಾ, ಚಿಕ್ಕಮ್ಮನ ಮಗ ಪ್ರಮೋದ್ ಹಾಗೂ ಅಕ್ಕ ರೇಣುಕಾ ಅವರ ಖಾತೆಗಳಿಗೂ ಹಣ ವರ್ಗಾಯಿಸಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
2024ರ ಜನವರಿಯಿಂದ 2026ರ ಜನವರಿವರೆಗೆ ಒಟ್ಟು ₹42,97,350 ಹಣವನ್ನು ಪ್ರದೀಪ್ ಅವರಿಂದ ಪಡೆದುಕೊಂಡಿದ್ದಳು ಎನ್ನಲಾಗಿದೆ.
ಪಡೆದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಪ್ರದೀಪ್ ಅವರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು. ಅಲ್ಲದೆ, ಅವರು ಕೆಲಸ ಮಾಡುವ ಉಡುಪಿ ಕಚೇರಿಗೆ ಬಂದು ಸಿಬ್ಬಂದಿ ಹಾಗೂ ಗ್ರಾಹಕರ ಎದುರು ಮಾನಹಾನಿ ಮಾಡುವುದಾಗಿ ಎಚ್ಚರಿಸಿದ್ದಳು.
ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹಾಗೂ ಸಂಸ್ಥೆಯ ಹಣ ದುರುಪಯೋಗಪಡಿಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಸುಳ್ಳು ಪತ್ರ ಬರೆದು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆ ಹಾಕಿದ್ದಳು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಪ್ರದೀಪ್ ನೀಡಿದ ದೂರಿನಂತೆ ನಾಗರತ್ನ, ಹೇಮಂತ್ ಕರ್ಕೇರಾ, ಪ್ರಮೋದ್ ಹಾಗೂ ರೇಣುಕಾ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಅ.26ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಸವೇಶ್ವರ ನಗರದಲ್ಲಿ ನಾಗರತ್ನ ಮತ್ತು ಹೇಮಂತ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.















