ಉಡುಪಿ: ಬೇಟೆಗಾಗಿ ಗುಂಡು ಹಾರಿಸಿದ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬೇಟೆಯ ವೇಳೆ ಬಂದೂಕಿನಿಂದ ಹಾರಿದ ಗುಂಡು ಕಾರು ಮತ್ತು ಮನೆ ಬಾಗಿಲಿಗೆ ಬಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.

ಕುದಿ ಗ್ರಾಮದ ಕೊಂಡಾಡಿಯ ಪ್ರದೀಪ್ (32) ಹಾಗೂ ಹಿರಿಯಡ್ಕ ಗುಡ್ಡೆಯಂಗಡಿಯ ಮನೋಜ್ (25) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ಹಿರಿಯಡಕ ಕಣಜಾರು ಗುರುರಾಜ್ ಮಂಜಿತ್ತಾಯರ ಮನೆಯ ಸಮೀಪದ ಹಾಡಿಯ ಬಳಿ ಶಿಕಾರಿ ಮಾಡುವ ಉದ್ದೇಶದಿಂದ ಹೋಗಿದ್ದರು. ಈ ವೇಳೆ ಬಂದೂಕಿನಿಂದ ಹಾರಿದ ಗುಂಡು ಕಾರಿನ ಗಾಜಿಗೆ ತಾಗಿ, ಮರದ ಬಾಗಿಲಿಗೆ ಬಡಿದಿದೆ.

ಬಂಧಿತರಿಂದ 50 ಸಾವಿರ ರೂ. ಮೌಲ್ಯದ ಪರವಾನಿಗೆರಹಿತ ತೋಟೆ ಕೋವಿ, ಏಳು ತೋಟೆಗಳು ಹಾಗೂ 40 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.