ಉಡುಪಿ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಗೆ ರಾಜ್ಯದ ಸ್ಥಾನಮಾನ ದೊರಕದಿರುವುದು ಬೇಸರದ ಸಂಗತಿ. ಪ್ರತ್ಯೇಕ ಮಾನ್ಯತೆ ಸಿಕ್ಕಿದರೆ ತುಳು ಭಾಷೆಯ ಅಭಿವೃದ್ಧಿ ಹಾಗೂ ಸಾಹಿತ್ಯ, ಕಲೆ, ಪರಂಪರೆಯ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಹೇಳಿದರು.
ತುಳುಕೂಟ ಉಡುಪಿ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉಡುಪಿ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ತುಳು ಸಂಭ್ರಮ ‘ಜೋಕ್ಲೆಗಾದ್ ತುಳು ನಡಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ತುಳು ಭಾಷೆ ಮಾತನಾಡುವ ಪ್ರತಿಜ್ಞೆ ಮಾಡಬೇಕು. ಆಗ ತುಳು ಸಂಪ್ರದಾಯ, ಆಚಾರ ವಿಚಾರಗಳನ್ನು ಕಲಿಯುವುದರ ಜತೆಗೆ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ತುಳುಕೂಟದ ಗೌರವಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ತೃತೀಯ ಭಾಷೆ ಆಗಿ ತುಳು ಕಲಿಯಲು ಅವಕಾಶ ಇದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಆ ಮೂಲಕ ತುಳುವಿನ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ಮನೆಯಲ್ಲಿ ತುಳುಭಾಷೆ ಮಾತನಾಡುವ ಮೂಲಕ ತುಳು ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷ ವಿ.ಜಿ. ಶೆಟ್ಟಿ ಮಾತನಾಡಿ, ವ್ಯಕ್ತಿಗೆ ತನ್ನ ಸಂಸ್ಕೃತಿ, ಭಾಷೆ ಹಾಗೂ ಇತಿಹಾಸದ ಅರಿವಿಲ್ಲದಿದ್ದರೆ, ಆತ ಬೇರು ಇಲ್ಲದ ಮರದಂತೆ ಆಗುತ್ತಾನೆ. ಹಾಗಾಗಿ ಮಕ್ಕಳಿಗೆ ತುಳು ಸಂಸ್ಕೃತಿ, ಭಾಷೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಸಮಾಜ ಸೇವಕಿ ಪದ್ಮ ಕಿಣಿ, ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಉಪಾಧ್ಯಕ್ಷ ಮಹಮ್ಮದ್ ಮೌಲ, ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಕೋಟ್ಯಾನ್, ಶಾಲಾ ಅಭಿವೃದ್ಧಿ ಸಮಿತಿಯ ತಾರಾದೇವಿ, ವಿದ್ಯಾರ್ಥಿ ನಾಯಕಿ ವೈಷ್ಣವಿ ಉಪಸ್ಥಿತರಿದ್ದರು.
ತಾರಾ ಆಚಾರ್ಯ, ಸರೋಜ ಯಶವಂತ, ಯಶೋದ ಕೇಶವ್, ವಿದ್ಯಾ ರಮೇಶ, ಚಂದ್ರಶೇಖರ್ ಎರ್ಮಾಳ್, ವಿವೇಕಾನಂದ ಹಾಗೂ ರಮೇಶ್ ಕಲ್ಮಾಡಿ ಅವರು ತೀರ್ಪುಗಾರರಾಗಿ ಸಹಕರಿಸಿದರು.
ಕಾರ್ಯಕ್ರಮ ಸಂಚಾಲಕ ಯಾದವ ಕರ್ಕೇರ ಸ್ವಾಗತಿಸಿದರು. ಉಪನ್ಯಾಸಕಿ ಸುಚಿತ್ರಾ ವಂದಿಸಿದರು. ದಯಾನಂದ ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.