ತುಳು ಭಾಷೆಗೆ ಜನ-ಆಡಳಿತ‌ ವರ್ಗದಿಂದ ಮಾನ್ಯತೆ ದೊರೆಯಬೇಕು: ಪ್ರೊ.ಬಿ.ಎ.ವಿವೇಕ್ ರೈ

ಉಡುಪಿ: ತುಳು ಭಾಷೆ, ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು ಮಾತ್ರ ಮುಖ್ಯ ಅಲ್ಲ. ಅದಕ್ಕೆ ಜನರು ಹಾಗೂ ಆಡಳಿತ ವರ್ಗದಿಂದ ಮಾನ್ಯತೆ ಸಿಗುವ ಕೆಲಸ ಆಗಬೇಕು.‌ ಅದಕ್ಕಾಗಿ ತುಳು ಭಾಷೆ, ಸಾಹಿತ್ಯ ಕ್ಷೇತ್ರದ ಬೆಳೆವಣಿಗೆಗೆ ನಮ್ಮಿಂದಾಗುವ ಕೆಲಸವನ್ನು ನಾವು ಮಾಡಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ. ಬಿ.ಎ. ವಿವೇಕ್ ರೈ ಹೇಳಿದರು.
ತುಳುಕೂಟ ಉಡುಪಿ ಇದರ ಆಶ್ರಯದಲ್ಲಿ ಉಡುಪಿ ಕಿದಿಯೂರು ಹೋಟೆಲ್‌ನ ಸಭಾಂಗಣದಲ್ಲಿ ಭಾನುವಾರ ನಡೆದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಹಾಗೂ ಸಾಮಗೆರೆ ನೆಂಪುದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ತುಳು ಯಾವುದೇ ಒಂದು ಧರ್ಮ, ಜಾತಿಗೆ ಸೀಮಿತವಾದ ಭಾಷೆ ಅಲ್ಲ. ಅದು ಇಡೀ ನಾಡಿನ ಭಾಷೆಯಾಗಿದೆ. ಐವತ್ತು ವರ್ಷಗಳ ಹಿಂದೆ ಶಾಲೆಗಳಲ್ಲಿ ತುಳು ಮಾತನಾಡಿದರೆ ದಂಡ ವಿಧಿಸುತ್ತಿದ್ದರು. ಆದರೆ ಇಂದು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಹಂತಕ್ಕೆ ತುಳು ಭಾಷೆ ಬೆಳೆದಿದೆ ಎಂದರು.
ಎಲ್ಲ ಪ್ರಾದೇಶಿಕ ಭಾಷೆಗಳು ಸಹ ರಾಷ್ಟ್ರ ಭಾಷೆಗಳೆಂದು ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಕನ್ನಡ ಹಾಗೂ ಕರಾವಳಿಯಲ್ಲಿ ತುಳು ನಮಗೆ ರಾಷ್ಟ್ರ ಭಾಷೆ ಆಗಿದೆ. ತುಳು ಭಾಷೆಯಲ್ಲಿ ಪದ್ಯ, ನಾಟಕ ಜತೆಗೆ ಕಾದಂಬರಿ ಕೃತಿಗಳು ಹೆಚ್ಚೆಚ್ಚು ಪ್ರಕಟಗೊಳ್ಳಬೇಕು. ಕನ್ನಡ ಕಾದಂಬರಿ ತುಳುವಿಗೆ ತುಳು ಕಾದಂಬರಿ ಕನ್ನಡಕ್ಕೆ ಅನುವಾದ ಆಗಬೇಕು ಎಂದರು.
ಹಾಗೆಯೇ ತುಳು ಭಾಷೆಯ ಬೆಳವಣಿಗೆಯ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದು ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಲು ಸಹಕಾರಿ ಆಗಲಿದೆ. ಆದರೆ ವ್ಯಾಟ್ಸಪ್‌, ಫೇಸ್‌ಬುಕ್‌ನಲ್ಲಿ ತುಳು ಬಹರಗಳನ್ನು ಪ್ರಕಟಿಸುವವರು ತುಳು ಯಕ್ಷಗಾನಗಳನ್ನು ನೋಡಬೇಕು. ಅಲ್ಲಿ ಬರುವ ತುಳು ಭಾಷಾ ಪ್ರಯೋಗವನ್ನು ಗಮನಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ಅಕ್ಷತರಾಜ್ ಪೆರ್ಲ ಅವರ ಬೊಳ್ಳಿ ಕೃತಿಗೆ ಹಾಗೂ ರಾಜಶ್ರೀ ಟಿ. ರೈ ಅವರ ಚೌಕಿ ಕೃತಿಗೆ ಪ್ರದಾನ ಮಾಡಲಾಯಿತು. ಸಾಮಗೆರೆ ನೆಂಪುದ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ ದಿನೇಶ್‌ ಅಮ್ಮಣ್ಣಾ ಅವರಿಗೆ ಪ್ರದಾನ ಮಾಡಲಾಯಿತು.
ತುಳುಕೂಟದ ಅಧ್ಯಕ್ಷ ವಿ.ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪುರುಷೋತ್ತಮ ಶೆಟ್ಟಿ, ಕಲಾವಿದ ಸಂಜಯ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಪಣಿಯಾಡಿ ಕಾದಂಬರಿ ಪ್ರಶಸ್ತಿಯ ಸಂಚಾಲಕ ಪ್ರಕಾಶ್‌ ಸುವರ್ಣ ಕಟಪಾಡಿ
ಉಪಸ್ಥಿತರಿದ್ದರು.
ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವನೆಗೈದರು. ತಾರಾ ಆಚಾರ್ಯ ಬೊಳ್ಳಿ ಹಾಗೂ ಚೌಕಿ ಕೃತಿಯ ಕುರಿತು‌ ಪುತ್ತಿಗೆ ಪದ್ಮನಾಭ ರೈ ಪರಿಚಯ ಮಾಡಿದರು.