ಉಡುಪಿ: ರೈತರು ಕೃಷಿ ಚಟುವಟಿಕೆಗಳಿಗೆ ತಮ್ಮ ಜಮೀನಿನ ಮಣ್ಣನ್ನು ಬಳಸಲು ಸಾಗಾಣಿಕೆ ಮಾಡುತ್ತಿರುವಾಗ ತೊಂದರೆ ಆಗುತ್ತಿದೆ ಎಂಬ ದೂರುಗಳು ಬರುತ್ತಿವೆ, ಈ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವಾಗ ಅಡ್ಡಗಟ್ಟುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ರೈತರುಗಳು ತಮ್ಮ ಕೃಷಿ ಚಟುವಟಿಕೆಗಳಿಗೆ ತಮ್ಮ ಖಾಸಗಿ ಜಮೀನುಗಳಿಂದ ಮಣ್ಣುಗಳನ್ನು
ಸಾಗಾಟ ಮಾಡಿ ಇನ್ನೊಂದು ಜಮೀನಿಗೆ ಬಳಸುತ್ತಿದ್ದಾರೆ. ಆದರೆ ಇನ್ಯಾವುದೋ ಅನ್ಯ ಉದ್ದೇಶಕ್ಕೆ ಬಳಸುತ್ತಿಲ್ಲ. ನಿಯಮಾನುಸಾರ
ಅವರುಗಳಿಗೆ ಸಮಸ್ಯೆ ಉಂಟಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಶಾಸಕರುಗಳಾದ ಸುನಿಲ್ ಕುಮಾರ್ ಮಾತನಾಡಿ, ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ದೂರುಗಳನ್ನು ಕೆಲವರು ತಮ್ಮ ಲಾಭಕ್ಕಾಗಿ ನೀಡುತ್ತಾರೆ. ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದರು.
ಶಾಸಕರುಗಳಾದ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಇತ್ತೀಚೆಗೆ ಕೋಟ ವ್ಯಾಪ್ತಿಯಲ್ಲಿ ಮಣ್ಣು ಸಾಗಾಟ ಲಾರಿಯಿಂದ ಎರಡು ಅಪಘಾತ ಪ್ರಕರಣಗಳು ಆಗಿದ್ದು, ನಂತರದ ದಿನಗಳಲ್ಲಿ ರೈತರು ಮಣ್ಣು ಸಾಗಾಣಿಕೆ ಸಂಬಂಧ ದೂರುಗಳು ಬರುತ್ತಿವೆ.
ಅಪಘಾತ ಪ್ರಕರಣದ ಈ ಹಿಂದೆ ಕಳೆದ ಒಂದು ವರ್ಷದಿಂದ ಈ ರೀತಿಯ ದೂರುಗಳು ಬಂದಿರುವುದಿಲ್ಲ. ರೈತರಿಗೆ ಯಾವುದೇ ರೀತಿಯ
ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು ಸೂಕ್ತ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಶಾಸಕರುಗಳಾದ ಯಶ್‌ಪಾಲ್ ಎ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿಂಧ್ಯ ಎನ್.ಎಮ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
















