ಉಡುಪಿ: ವಾಹನ ಚಲಾವಣಾ ಪರವಾನಿಗೆ (ಡ್ರೈವಿಂಗ್ ಲೈಸನ್ಸ್ ) ಇಲ್ಲದ ವ್ಯಕ್ತಿಗೆ ಬುಲೆಟ್ ನೀಡಿದ ಬುಲೆಟ್ ಮಾಲಕನಿಗೆ 5000 ರೂ. ದಂಡ ಹಾಕಲಾಗಿದೆ..!
ಅಷ್ಟೇ ಅಲ್ಲ ಅದೊಂದೇ ಪ್ರಕರಣದಲ್ಲಿ ಒಟ್ಟು 12 ಸಾವಿರ ರೂ. ದಂಡ ವಿಧಿಸಲಾಗಿದ್ದು, ಈ ಘಟನೆ ಉಡುಪಿಯಲ್ಲಿ ಬಳಿ ಸೆ.7ರಂದು ನಡೆದಿದೆ.
ಚಾಲನಾ ಪರವಾನಿಗೆ ಹೊಂದಿರದ ಬುಲೆಟ್ ಸವಾರನಿಗೆ 5000ರೂ., ಸವಾರ ಹಾಗೂ ಸಹ ಸವಾರರು ಹೆಲ್ಮೆಟ್ ಧರಿಸದಕ್ಕೆ ಒಟ್ಟು 2 ಸಾವಿರ ರೂ. ಮತ್ತು ಚಾಲನಾ ಪರವಾನಿಗೆ ಇಲ್ಲದವರಿಗೆ ವಾಹನ ನೀಡಿದ ಮಾಲಕನಿಗೆ 5000 ರೂ. ದಂಡ ವಿಧಿಸಿ ನೋಟೀಸ್ ನೀಡಿದ್ದಾರೆ. ಅಲ್ಲದೇ ಪರವಾನಿಗೆ ಹೊಂದಿರದ ಹಿನ್ನೆಲೆಯಲ್ಲಿ ಬುಲೆಟ್ ನ್ನು ಪೊಲೀಸರು ವಶದಲ್ಲಿರಿಸಿಕೊಂಡಿದ್ದಾರೆ. ಸೆ.13ರ ಒಳಗಾಗಿ ಠಾಣೆಗೆ ತೆರಳಿ ದಂಡ ಪಾವತಿಸಿ ಬುಲೆಟ್ ಪಡೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ತಪ್ಪಿದಲ್ಲಿ ನ್ಯಾಯಾಲಯದ ಮೂಲಕ ದಂಡ ಪಾವತಿಸಿ ಬುಲೆಟ್ ಪಡೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ಹೇಳುತ್ತಾರೆ.