ರಾಜ್ಯದ ಮಳೆ ಪಟ್ಟಿಯಲ್ಲಿ ಉಡುಪಿಗೆ ಅಗ್ರಸ್ಥಾನ: ಆಗುಂಬೆಯ ಸ್ಥಾನವನ್ನು ಕಿತ್ತುಕೊಂಡ ಕರಾವಳಿ ಜಿಲ್ಲೆಯ ಭಾರೀ ಮಳೆಗೆ ಅರಣ್ಯ ನಾಶ ಕಾರಣ!

ಉಡುಪಿ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಎಡೆಬಿಡದೆ ಸುರಿಯುವ ಭಾರೀ ಮಳೆಗೆ ಹೆಸರುವಾಸಿಯಾಗಿದ್ದು, ದಕ್ಷಿಣ ಭಾರತದ ಚಿರಾಪುಂಜಿ ಎನ್ನುವ ಬಿರುದನ್ನು ಗಳಿಸಿರುವ ವಿಷಯ ಎಲ್ಲರಿಗೂ ತಿಳಿದಿರುವಂತಹದ್ದೆ. ಆದರೆ, ಇದೀಗ ಆಗುಂಬೆಯ ಕೈಯಿಂದ ಈ ಬಿರುದನ್ನು ಉಡುಪಿ ಜಿಲ್ಲೆಯು ಕಸಿದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಅಂಕಿಅಂಶಗಳ ಪ್ರಕಾರ, 2015 ಮತ್ತು 2021 ರ ನಡುವೆ ಕಳೆದ ಏಳು ವರ್ಷಗಳಲ್ಲಿ ಇಡೀ ರಾಜ್ಯಕ್ಕೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳು ಐದು ಬಾರಿ ಅತಿ ಹೆಚ್ಚು ಮಳೆಯನ್ನು ಪಡೆದು ದಾಖಲೆ ನಿರ್ಮಿಸಿವೆ. 2015 ಮತ್ತು 2018 ಅನ್ನು ಹೊರತುಪಡಿಸಿ, ಉಡುಪಿ ಜಿಲ್ಲೆ ಮಳೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಮುಂಬರುವ ದಿನಗಳ ಸಂಕೇತವಾಗಿದೆ. ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಬೆಳವಣಿಗೆ ನಡೆದಿದೆ ಎಂದು ತಜ್ಞರು ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ, ಉಡುಪಿ ಜಿಲ್ಲೆಯ ಬೈರಂಪಳ್ಳಿಯಲ್ಲಿ 2016 ರಲ್ಲಿ ಅತಿ ಹೆಚ್ಚು (5,916 ಮಿಮೀ) ಮಳೆ ದಾಖಲಾಗಿದೆ. ನಂತರದ ವರ್ಷದಲ್ಲಿ ಕಾರ್ಕಳ ತಾಲೂಕಿನ ಶಿರಾಳದಲ್ಲಿ 6,936 ಮಿ.ಮೀ ಮಳೆ ದಾಖಲಾಗಿದೆ. 2016 ಮತ್ತು 2017 ರಲ್ಲಿ, ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಕ್ರಮವಾಗಿ 5,524 ಮಿಮೀ ಮತ್ತು 5,345 ಮಿಮೀ ಮಳೆ ದಾಖಲಾಗಿದೆ. ಅದೇ ರೀತಿ 2019 ರಲ್ಲಿ ಉಡುಪಿಯ ಹೆಬ್ರಿ 9,340 ಮಿಮೀ ಮಳೆಯೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 2020 ರಲ್ಲಿ ಇನ್ನಂಜೆಯಲ್ಲಿ 7,988 ಮಿಮೀ ಮಳೆಯಾಗಿದೆ. ಈ ಎರಡು ವರ್ಷಗಳಲ್ಲೂ ಆಗುಂಬೆ ಈ ಅಂಕಿ ಅಂಶಗಳ ಹತ್ತಿರಕ್ಕೂ ಸುಳಿದಿರಲಿಲ್ಲ!

ಈ ಬೆಳವಣಿಗೆಗೆ ಹವಾಮಾನ ಬದಲಾವಣೆ ಕಾರಣ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ ವಿ ರಾಮಚಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಏಕ-ವೃಕ್ಷ ಕೃಷಿ ತೋಟಗಳು ಮತ್ತು ಹೆಚ್ಚುತ್ತಿರುವ ಅರಣ್ಯನಾಶವು ಹವಾಮಾನ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರೀಕ್ಷಿತ 33% ರಷ್ಟಿರಬೇಕಾಗಿರುವ ಅರಣ್ಯ ಪ್ರದೇಶದಲ್ಲಿ ಕರ್ನಾಟಕವು ಕೇವಲ 20% ಹೊಂದಿದೆ. ರಾಜ್ಯದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಕೇವಲ ಶೇ.18ರಷ್ಟು ಅರಣ್ಯವಿದ್ದು, ಕಳೆದ ಹತ್ತು ವರ್ಷಗಳಲ್ಲಿ ಶೇ.10ರಷ್ಟು ಅರಣ್ಯವನ್ನು ಕಳೆದುಕೊಂಡಿದೆ ಮುಂದಿನ ದಿನಗಳಲ್ಲಿ ಇದು ನೀರಿನ ಸಮಸ್ಯೆ ಹಾಗೂ ಅಕಾಲಿಕ ಮಳೆಗೆ ಕಾರಣವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.