ಉಡುಪಿ: ನಾಳೆ (ಜೂ.15) ಮಿಷನ್ ಆಸ್ಪತ್ರೆಯ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಮತ್ತು ಸಿಟಿ ಸ್ಕ್ಯಾನ್ ಘಟಕದ ಉದ್ಘಾಟನೆ

ಉಡುಪಿ: ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ಉಡುಪಿ ಇದರ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಮತ್ತು ಸಿಟಿ ಸ್ಕ್ಯಾನ್ ಘಟಕದ ಉದ್ಘಾಟನೆ ಕಾರ್ಯಕ್ರಮವು ಜೂನ್ 15ರಂದು ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರೋಪ ಕಾರ್ಯಕ್ರಮವು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಉಪಾಧ್ಯಕ್ಷ ವಿಕ್ಟರ್ ಅವರ ನೇತೃತ್ವದಲ್ಲಿ ಮಧ್ಯಾಹ್ನ 2.30 ಕ್ಕೆ ಮಿಷನ್ ಆಸ್ಪತ್ರೆ ಚಾಪೆಲ್‌ನಲ್ಲಿ ಕೃತಜ್ಞತಾ ಸೇವೆಯೊಂದಿಗೆ ಆರಂಭವಾಗಲಿದೆ. ಬಳಿಕ ಸಂಜೆ 4 ಗಂಟೆಗೆ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಮೆರವಣಿಗೆ ಆರಂಭಗೊಂಡು, ಮಿಷನ್ ಆಸ್ಪತ್ರೆಯಲ್ಲಿ ಮುಕ್ತಾಯವಾಗಲಿದೆ. ಸಂಜೆ 5 ಗಂಟೆಗೆ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ಹೇಮಚಂದ್ರ ಕುಮಾರ್ ನೂತನ ಸಿಟಿ ಸ್ಕ್ಯಾನ್ ಘಟಕವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಎನ್.ಎಚ್. ಷಾ ಮಜುಂದಾರ್ ವೈದ್ಯಕೀಯ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪೌಲ್ ಸಿ. ಸಾಲಿನ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಖಜಾಂಚಿ ವಿನ್ಸೆಂಟ್ ಪಾಲಣ್ಣ, ಯುಬಿಎಂಸಿ ಅಧ್ಯಕ್ಷ ವಿಶಾಲ ಶಿರಿ, ವೈಎಂಸಿಎ ರಾಷ್ಟ್ರೀಯ ಮಂಡಳಿ ಉಪಾಧ್ಯಕ್ಷ ನೋಯೆಲ್ ಅಮಣ್ಣ, ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಕಾರ್ಯದರ್ಶಿ ವಿಲಿಯಂ ಕ್ಯಾರಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ನರ್ಸಿಂಗ್ ಕಾಲೇಜ್ ಬ್ಲಾಕ್, ಅಡ್ವಾನ್ಸ್ಡ್ ಲ್ಯಾಪ್ರೋಸ್ಕೋಪಿಕ್ ಮತ್ತು ಲೇಸರ್ ಸರ್ಜರಿ ಸೆಂಟರ್, ‘ವಾತ್ಸಲ್ಯ’ ಉಪಶಾಮಕ ಆರೈಕೆ ಕೇಂದ್ರ, ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು ಹೊಸ ಅಗ್ನಿ ಸುರಕ್ಷತಾ ಸಾಧನಗಳನ್ನು ಸೇರಿಸುವ ಮೂಲಕ ಹಲವು ಸುಧಾರಣೆಗಳನ್ನು ಅಳವಡಿಸಲಾಗಿವೆ. ಉಚಿತ ವೈದ್ಯಕೀಯ ಶಿಬಿರಗಳು, ಕಾಪು ಅಲ್ ಫಲಾಹ್ ಸಮುದಾಯ ಚಿಕಿತ್ಸಾಲಯದಲ್ಲಿ ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳು, ಪ್ರಾರ್ಥನಾ ಶಿಬಿರಗಳು, ಅಂತರ್ ಚರ್ಚ್ ಸಂಗೀತ ಸ್ಪರ್ಧೆ ಮತ್ತು ಮಹಿಳೆಯರಿಗಾಗಿ ಅಂತರ ಚರ್ಚ್ ಥ್ರೋ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ವೈದ್ಯರಿಗಾಗಿ ಶೈಕ್ಷಣಿಕ ಸಮ್ಮೇಳನ ಮತ್ತು ಪ್ರಾದೇಶಿಕ ಕಾರ್ಯಾಗಾರಗಳನ್ನು ನಡೆಸಲಾಗಿತ್ತು. ಕಳೆದ ವಾರ ‘ಹೀಲಿಂಗ್ ರೈನ್’ ಗೋಷ್ಠಿ ನಡೆಯಿತು.

1923ರಲ್ಲಿ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ಸ್ಥಾಪನೆ:

ಜೂನ್ 15, 1923 ರಂದು ಸ್ಥಾಪಿತವಾದ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಬಹುಶಃ ಈ ಪ್ರದೇಶದಲ್ಲಿ ಮೊದಲ ತಾಯಿ-ಮಗು ಕೇಂದ್ರೀಕೃತ ಘಟಕವಾಗಿದೆ. ಇದನ್ನು ಡಾ. ಇವಾ ಲೊಂಬಾರ್ಡ್ ಎಂಬ ಯುವ ಸ್ವಿಸ್ ಮಿಷನರಿ ವೈದ್ಯೆ ಈ ಪ್ರದೇಶದ ಬಡ ಮತ್ತು ದೀನದಲಿತ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದೊಂದಿಗೆ ಸ್ಥಾಪಿಸಿದ್ದರು. ಕೇವಲ ಆರು ಸಾಮರ್ಥ್ಯವನ್ನು ಹಾಸಿಗೆಗಳೊಂದಿಗೆ ಪ್ರಾರಂಭಗೊಂಡ ಆಸ್ಪತ್ರೆಯು ಪ್ರಸ್ತುತ 125 ಹಾಸಿಗೆಗಳ ಹೊಂದಿದೆ. ಹಗಲುರಾತ್ರಿ ಕ್ಯಾಶುವಾಲಿಟಿ, ತೀವ್ರ ನಿಗಾ ಘಟಕ, ಆಪರೇಷನ್ ಥಿಯೇಟರ್, ಲೇಬರ್ ಥಿಯೇಟರ್, ಎಕ್ಸ್-ರೇ, ಫಾರ್ಮಸಿ, ಡಯಾಲಿಸಿಸ್ ಘಟಕ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಪೀಡಿಯಾಟ್ರಿಕ್ಸ್, ಪ್ರಸೂತಿ ಮತ್ತು ಸ್ತ್ರೀರೋಗ, ಅರಿವಳಿಕೆ, ನೆಫ್ರಾಲಜಿ, ಕಾರ್ಡಿಯಾಲಜಿ, ಇಎನ್‌ಟಿ, ಡೆಂಟಲ್, ಆರ್ಥೋಪೆಡಿಕ್ಸ್, ಆಯುರ್ವೇದ ಮತ್ತು ಡರ್ಮಟಾಲಜಿ ಗಳಂತಹ ಎಲ್ಲಾ ಪ್ರಮುಖ ವೈದ್ಯಕೀಯ ವಿಶೇಷತೆಗಳು ಇಲ್ಲಿವೆ. ಒಂದು ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣವಿರುವ ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ತರಬೇತಿ ಪಡೆದ ಅನುಭವಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ 170 ಸಿಬ್ಬಂದಿ ತಂಡ ಸೇವೆ ಸಲ್ಲಿಸುತ್ತಿದೆ. ಆಸ್ಪತ್ರೆಯು ಸುಮಾರು 350 ವಿದ್ಯಾರ್ಥಿಗಳಿಗೆ ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿಜ್ಞಾನದಲ್ಲಿ ಕೋರ್ಸ್ಗಳನ್ನು ನೀಡುವ ಐದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ, ಜೊತೆಗೆ ಶಿಶುವಿಹಾರ ಶಾಲೆಯನ್ನು ಸಹ ನಡೆಸುತ್ತಿದೆ. ಇದರ ಸಮುದಾಯ-ಆಧಾರಿತ ಉಪಕ್ರಮಗಳಲ್ಲಿ ಕರುಣಾಲಯ (ವೃದ್ಧರ ಶುಶ್ರೋಷೆ ಸೇವಾ ಕೇಂದ್ರ), ಸಹಜೀವನ ವೃದ್ಧಾಶ್ರಮ ಮತ್ತು ‘ವಾತ್ಸಲ್ಯ’ ಉಪಶಮನ ಕೇಂದ್ರ ಸೇರಿವೆ. ಆಸ್ಪತ್ರೆಯು ಪ್ರತಿ ವರ್ಷ ಹಲವು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತದೆ. ಪ್ರಸ್ತುತ ಆಸ್ಪತ್ರೆಯು ಎನ್‌ಎಬಿಹೆಚ್ ಮಾನ್ಯತೆ ಪಡೆಯುವ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ನೀಡಿದರು.

ಮೊದಲನೆಯದಾಗಿ, ಮುಂದಿನ ದಿನಗಳಲ್ಲಿ ಬಂಜೆತನ ಕ್ಲಿನಿಕ್, ನವಜಾತ ಶಿಶುಗಳ ಘಟಕ, ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಮತ್ತು ಕ್ಯಾನ್ಸರ್ ಸೇವೆಗಳನ್ನು ತೆರೆಯುವ ಯೋಜನೆಗಳೊಂದಿಗೆ ಮಿಷನ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸುವುದು. ಎರಡನೆಯದಾಗಿ, ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ತನ್ನ ಬ್ಯಾನರ್ ಅಡಿಯಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಉದ್ದೇಶದಿಂದ ನರ್ಸಿಂಗ್ ಮತ್ತು ಸಂಬಂಧಿತ ವೈದ್ಯಕೀಯ ಶಾಸ್ತ್ರಗಳಲ್ಲಿ ಹೆಚ್ಚಿನ ಕೋರ್ಸ್ಗಳೊಂದಿಗೆ ತನ್ನ ಶೈಕ್ಷಣಿಕ ನೆಲೆಯನ್ನು ವಿಸ್ತರಿಸುವುದು. ಇದು ಉಡುಪಿಯ ಯುವ ಜನತೆಗೆ ಸ್ಥಳೀಯವಾಗಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಹೊಸ ಅವಕಾಶವನ್ನು ಕಲ್ಪಿಸಲಿದೆ. ಮತ್ತು ಅಂತಿಮವಾಗಿ, ಉಡುಪಿಯ ಗ್ರಾಮೀಣ ಪ್ರದೇಶಗಳಲ್ಲಿ ಹೋಮ್ ಕೇರ್ ಸೇವೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು (ಔಟ್‌ರೀಚ್ ಕ್ಲಿನಿಕ್) ಸ್ಥಾಪಿಸುವಂತಹ ಸಮುದಾಯ ಆಧಾರಿತ ಸೇವೆಗಳನ್ನು ನೀಡುವುದು.

ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಂಸ್ಥೆಯನ್ನಾಗಿ ಮಾಡುವುದು ಮತ್ತು ಗಡಿಗಳಿಲ್ಲದ ಆಸ್ಪತ್ರೆಯನ್ನಾಗಿ ಸ್ಥಾಪಿಸುವುದು ಇದರ ಉದ್ದೇಶವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ವೈದ್ಯ ಗಣೇಶ್ ಕಾಮತ್, ಪಿಆರ್ ಒ ರೋಹಿ ರತ್ನಾಕರ್, ಆಡಳಿತಾಧಿಕಾರಿ ದೀನಾ ಪ್ರಭಾವತಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸುಜಾ ಕರ್ಕಡ ಇದ್ದರು.