ಉಡುಪಿ: ಉಡುಪಿಯ ಅತ್ಯಂತ ಪ್ರಾಚೀನ ದೇಗುಲಗಳಗಳಲ್ಲಿ ಒಂದಾಗಿರುವ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ (ಜ. 18) ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಗಮಿಸಲಿದ್ದು, ಅಂದು ಸಂಜೆ ದೇಗುಲದ ಆವರಣದಲ್ಲಿ ನಡೆಯುವ ಧರ್ಮಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿರುವರು.
ಈ ಹಿಂದೆ 2004 ರಲ್ಲಿ ಮತ್ತು2010 ರಲ್ಲಿ ವಿವಿಧ ಜೀರ್ಣೋದ್ಧಾರ ಕಾರ್ಯಗಳನ್ನು ರಾಜ್ಯ ಸರಕಾರ ಮತ್ತು ಊರ ಪರವೂರ ಭಕ್ತಾಭಿಮಾನಿಗಳ ಸಹಕಾರದಲ್ಲಿ ನೆರವೇರಿಸಿ ವೈಭವದ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಗಿತ್ತು . ಅದರಲ್ಲೂ 2010 ರಲ್ಲಿ ಬ್ರಹ್ಮಕಲಶೋತ್ಸವದೊಂದಿಗೆ ನಡೆದ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವವು ಒಂದು ಅಪೂರ್ವ ದಾಖಲೆಯಾಗಿದೆ.
ಈ ಬಾರಿ ಸುಮಾರು ₹ 90ಲಕ್ಷ ವೆಚ್ಚದಲ್ಲಿ ಪರಿವಾರ ದೇವರುಗಳಾದ ಶ್ರೀ ಗಣಪತಿ ಶ್ರೀ ಉಮಾಮಹೇಶ್ವರ, ಶ್ರೀ ಆಂಜನೇಯ ಗುಡಿಗಳು ಹಾಗೂ ಪರಿವಾರ ದೈವಗಳಾದ ರಕ್ತೇಶ್ವರಿ ನಂದಿಗೋಣ ಬೊಬ್ಬರ್ಯ ಪಂಜುರ್ಲಿ ಬೈಕಾಡ್ತಿ ಗುಡಿಗಳನ್ನು ನೂತನವಾಗಿ ನಿರ್ಮಿಸಲಾಗಿದೆ.
ಶ್ರೀದೇವಳದಲ್ಲಿ ನಿತ್ಯದ ಹಾಗೂ ಕಾಲಾವಧಿ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಸಮಾಜಮುಖಿಯಾದ ಅನೇಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟು ಒಂದು ಮಾದರಿ ಶ್ರದ್ಧಾಕೇಂದ್ರವಾಗಿ ರೂಪಿಸಲು ನಿರಂತರ ಶ್ರಮಿಸಲಾಗುತ್ತಿದೆ .
ದೇವಳದ ಚಾವಡಿಯಲ್ಲಿ ಮಕ್ಕಳಿಗಾಗಿ ಯಕ್ಷಗಾನ ಭರತನಾಟ್ಯ ಕರಾಟೆ , ಯೋಗ ,ಭಜನೆ ತರಗತಿಗಳು ಆರೋಗ್ಯ ಶಿಬಿರಗಳು , ಕೃಷಿ ಸಂವಾದಗಳು ಪ್ರಸಿದ್ಧ ವಿದ್ವಾಂಸರಿಂದ ಸ್ವಚ್ಛತಾ ಜಾಗೃತಿ ಚಿಂತನೆಗಳು ಸಪ್ತಾಹ ಹಾಗೂ ಅನೇಕ ಕಲಾಕಾರ್ಯಕ್ರಮಗಳು ನಡೆಯುತ್ತಿವೆ.
2004 ರಲ್ಲಿ ನಡೆದ ಪ್ರಥಮ ಹಂತದ ನವೀಕರಣದ ಸಮಯ ಹಳೆಯ ಗರ್ಭಗುಡಿಯ ಗೋಡೆಯಲ್ಲಿ ದೊರೆತ ತಾಮ್ರ ಶಾಸನವು ಈ ದೇವಳದ ಪ್ರಾಚೀನತೆಗೆ ಸಾಕ್ಷಿಯಾಗಿದೆ. ನಂದಿ ನಾಗರೀ ಲಿಪಿಯಲ್ಲಿರುವ ಈ ಶಾಸನದ ಪ್ರಕಾರ ದೇವಳವು ಹದಿಮೂರನೇ ಶತಮಾನದಲ್ಲಿ ನವೀಕರಣಗೊಂಡಿದ್ದು, ಅದಕ್ಕೂ ಮೊದಲು ಸುಮಾರು9 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದಾಗಿದೆ. ಆ ಕಾಲದಲ್ಲಿ ಇಲ್ಲಿ ವಿದ್ಯಾಪೀಠವೂ ನಡೆಯುತ್ತಿತ್ತು ಎಂಬ ಉಲ್ಲೇಖವಿರುವ ವಿಚಾರಗಳು ದೇವಳದ ಭಕ್ತರಿಗೆ ಅತ್ಯಂತ ಸಂತೋಷ ತರುವ ವಿಚಾರವಾಗಿದೆ.
ಜ.18 ಬೆಳಿಗ್ಗೆ 10.21 ರ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ. ಸಂಜೆ ದೇಗುಲಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಭೇಟಿ ನೀಡುವರು.
ರಾತ್ರಿ 9ರಿಂದ ಹನುಮಗಿರಿ ಮೇಳದ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ಪ್ರಸಂಗ : ಶ್ರೀ ನಿವಾಸ ಕಲ್ಯಾಣ ಮಾಯಾ ಮಾರುತೇಯ ನಡೆಯಲಿದೆ.
ಧರ್ಮಸಭೆ:
ದಿವ್ಯ ಸಾನ್ನಿಧ್ಯ
ಮತ್ತು ಆಶೀರ್ವಚನ: ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು.
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು.
ಮುಖ್ಯ ಅಭ್ಯಾಗತರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನ.
ವಿಧಾನಸಭಾಧ್ಯಕ್ಷ ಕಾಗೇರಿ ವಿಶ್ವೇಶ್ವರ ಹೆಗಡೆ.
ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಶು ಸಂಗೋಪನೆ ಇಲಾಖೆಯ ಸಚಿವ ಪ್ರಭು ಚವ್ಹಾಣ್, ಸಂಸದೆ ಶೋಭಾ ಕರಂದ್ಲಾಜೆ ಎಂದು ದೇಗುಲದ ಆಡಳಿತ ಮೋಕ್ತೇಸರ ಆಗಿರುವ ಶಾಸಕ ಕೆ ರಘುಪತಿ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರುಗಳಾದ ಕೆ. ಗೋಪಾಲ ಶೆಟ್ಟಿ, ಶೇಖರ ಜತ್ತನ್ನ, ಲಕ್ಷ್ಮಣ ಸೇರಿಗಾರ್, ಲಕ್ಷ್ಮೀನಾರಾಯಣ ಆಚಾರ್ಯ, ಸುಂದರ ಅಮೀನ್, ಶೈಲಶ್ರೀ ದಿವಾಕರ ಶೆಟ್ಟಿ ಇದ್ದರು.