ಉಡುಪಿ: ನಾಳೆ (ಡಿ.25) ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕೂಟ “ಅಟಲ್ ಟ್ರೋಫಿ-2021”

ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ನಗರ ಬಿಜೆಪಿಯು ತನ್ನ ಯುವ ಮೋರ್ಚಾ ಮತ್ತು ವಾಲಿಬಾಲ್ ಫ್ರೆಂಡ್ಸ್ ಹನುಮಂತನಗರ ಇವರ ಸಹಭಾಗಿತ್ವದಲ್ಲಿ ಶಾಸಕ ಕೆ. ರಘುಪತಿ ಭಟ್ ಹಾಗೂ ಬಿಜೆಪಿ ಉಡುಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ನಿಟ್ಟೂರು ಸಂತ ಸಿಲಾಸ್ ಶಾಲಾ ಮೈದಾನದಲ್ಲಿ ನಾಳೆ (ಡಿ.25) ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕೂಟ “ಅಟಲ್ ಟ್ರೋಫಿ-2021” ಆಯೋಜಿಸಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಂದು ರಾತ್ರಿ 8.30ಕ್ಕೆ ಪಂದ್ಯಕೂಟಕ್ಕೆ ಚಾಲನೆ ನೀಡುವರು. ಸಂಸದ ಮತ್ತು ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿರುವರು.

ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರರನ್ನೊಳಗೊಂಡಿರುವ ಆಹ್ವಾನಿತ ಪ್ರತಿಷ್ಠಿತ 9 ತಂಡಗಳು ಈ ಪಂದ್ಯಕೂಟದಲ್ಲಿ ಸೆಣಸಾಡಲಿವೆ. ಪಂದ್ಯಕೂಟದ ವಿಜೇತ ಪ್ರಥಮ ಮೂರು ತಂಡಗಳು ಒಂದು ಲಕ್ಷ ರೂಪಾಯಿ ನಗದು ಮತ್ತು ಟ್ರೋಫಿಗಳನ್ನು ಹಂಚಿಕೊಳ್ಳಲಿವೆ.

ಇದರ ಹೊರತಾಗಿ 22 ರ ವಯೋಮಿತಿಯ ಒಳಗಿನ ತಂಡಗಳ ಪಂದ್ಯಕೂಟ ಆಯೋಜಿಸಲಾಗಿದ್ದು, ಬೆಳಿಗ್ಗೆ 8.30 ಗಂಟೆಗೆ ಆರಂಭವಾಗಲಿದೆ. ಹಾಗೆಯೆ ಸಂಜೆ 7 ಗಂಟೆಗೆ ಮಹಿಳಾ ವಾಲಿಬಾಲ್ ಪ್ರದರ್ಶನ ಪಂದ್ಯಗಳನ್ನು ಕೂಡ ಆಯೋಜಿಸಲಾಗಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.