ಉಡುಪಿ: 217 ಮಂದಿಗೆ ಕೊರೊನಾ ಪಾಸಿಟಿವ್: 36 ವರ್ಷದ ಯುವಕ ಸಹಿತ ಆರು ಮಂದಿ ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು 217 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5360 ಕ್ಕೆ ಏರಿಕೆಯಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 34 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 51 ಮಂದಿ ಸಹಿತ 85 ಮಂದಿ ಕೊರೊನಾ ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ 3157 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ 2153 ಸಕ್ರಿಯ ಕೊರೊನಾ ಸೋಂಕಿತರಿದ್ದು, 1054 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1099 ಮಂದಿ ಸೋಂಕಿತರು ಹೋಮ್ ಐಸೋಲೇಷನ್ ನಿಗಾದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾಗೆ ಆರು ಬಲಿ:
ಉಡುಪಿಯಲ್ಲಿ ಇಂದು ಕೊರೊನಾಗೆ ಆರು ಮಂದಿ ಅಸುನೀಗಿದ್ದಾರೆ. ಕುಂದಾಪುರ ತಾಲ್ಲೂಕಿನ 82 ವರ್ಷದ ವೃದ್ಧ, 52 ವರ್ಷದ ಪುರುಷ, ಉಡುಪಿ ತಾಲ್ಲೂಕಿನ 55 ವರ್ಷದ ಪುರುಷ, 36 ವರ್ಷದ ಯುವಕ, 70 ವರ್ಷದ ವೃದ್ಧ ಹಾಗೂ ಕಾರ್ಕಳ ತಾಲ್ಲೂಕಿನ 75 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 50 ಮಂದಿ ಸಾವನ್ನಾಪ್ಪಿದ್ದಾರೆ ಎಂದು ತಿಳಿಸಿದ್ದಾರೆ.