ಉಡುಪಿ:ಯುವ ಜನತೆ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು: ಜಿಲ್ಲಾಧಿಕಾರಿ ಸ್ವರೂಪ ಟಿ ಕೆ

ಉಡುಪಿ: ಯುವಕರು ದೇಶದ ಭವಿಷ್ಯ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದೇಶವನ್ನು ಮುನ್ನಡೆಸುವ ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು ಉತ್ತಮ ಆರೋಗ್ಯ ಹೊಂದಿ ಭವಿಷ್ಯದಲ್ಲಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು.

ಅವರು ಇಂದು ಕುಂಜಿಬೆಟ್ಟುವಿನ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಂಬಾಕು ಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಂಬಾಕು ಸೇವನೆ ಒಂದು ಸಾಮಾಜಿಕ ಪಿಡುಗು. ಸರಕಾರದ ಮುಂದೆ ತಂಬಾಕು ಸೇವನೆಯನ್ನು ನಿಷೇಧಿಸುವ ಸಮಸ್ಯೆ ಒಂದೆಡೆಯಾದರೆ, ಯುವ ಜನತೆಯನ್ನು ತಂಬಾಕು ಚಟದಿಂದ ದೂರ ಇರಿಸುವ ಕಾರ್ಯವನ್ನು ನಿಭಾಯಿಸುವ ಸಮಸ್ಯೆ ಇನ್ನೊಂದೆಡೆ. ತಂಬಾಕು ಸೇವನೆಯಿಂದ ದೈಹಿಕ ಮತ್ತು ಮಾನಸಿಕವಾಗಿ ತೀವ್ರವಾದ ದುಷ್ಪರಿಣಾಮಗಳಾಗುತ್ತವೆ. ಸಮಾಜದಲ್ಲಿ ಇದೊಂದು ಗಂಭೀರ ಸಮಸ್ಯೆ ಆಗಿದ್ದು ಸರಕಾರವು ನಾನಾ ಕಾರ್ಯಕ್ರಮಗಳನ್ನು ಕಾನೂನಾತ್ಮಕವಾಗಿ ಹಮ್ಮಿಕೊಳ್ಳುತ್ತಿದೆ. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ತಲಾ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವಾಗಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತಂಬಾಕು ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಇದ್ದಾಗ ಯುವಕರು ಆ ದಾರಿಯಲ್ಲಿ ಸಾಗುವುದಿಲ್ಲ ಎಂದರು.

ತಂಬಾಕು ಜಾಹೀರಾತುಗಳ ಪ್ರದರ್ಶನಕ್ಕೆ ಕಡಿವಾಣ ಹಾಕಲಾಗಿದೆ. ಶಾಲಾ ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧಿಸಲಾಗಿದೆ. ತಂಬಾಕು ನಿಯಂತ್ರಣ ಕೇವಲ ಸರಕಾರದಿಂದ ಸಾಧ್ಯವಿಲ್ಲ. ಈ ಪಿಡುಗನ್ನು ಆರಂಭದಲ್ಲೇ ಹತ್ತಿಕ್ಕಲು ಸರಕಾರ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಅನಧಿಕೃತವಾಗಿ ತಂಬಾಕು ಮಾರುವ ಅಂಗಡಿಗಳ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಸರಕಾರದೊಂದಿಗೆ ಯುವಕರು ಈ ಕಾರ್ಯದಲ್ಲಿ ಕೈ ಜೋಡಿಸಬೇಕು. ತಮ್ಮ ಸ್ನೇಹಿತರು, ಕುಟುಂಬದವರು, ನೆರಮನೆಯವರು ತಂಬಾಕು ಚಟಕ್ಕೆ ಬಲಿಯಾಗದಂತೆ ಅವರ ಮನವೊಲಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೆ.ಎಂ.ಸಿ ಪ್ರಾಧ್ಯಾಪಕ ಡಾ ಮುರಳೀಧರ್ ಕುಲಕರ್ಣಿ ತಂಬಾಕು ಮುಕ್ತ ಯುವ ಅಭಿಯಾನ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲೆ ಸಲಹೆಗಾರ್ತಿ ಮಂಜುಳಾ ಶೆಟ್ಟಿ, ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲೆ ಆಶಾ ಕುಮಾರಿ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ವಂದಿಸಿದರು.