ಉಡುಪಿ: ರಾಷ್ಟ್ರ ರಕ್ಷಣಾ ಸಮಿತಿ ಉಡುಪಿ ಜಿಲ್ಲೆಯ ವತಿಯಿಂದ ಆಪರೇಷನ್ ಸಿಂಧೂರ ಯಶಸ್ಸಿನ ಸಂಭ್ರಮಾಚರಣೆ ಸಲುವಾಗಿ ವೀರ ಸೇನಾನಿಗಳಿಗೆ ನೈತಿಕ ಬಲ ತುಂಬುವ ಉದ್ದೇಶದಿಂದ ಉಡುಪಿ ಜೋಡುಕಟ್ಟೆಯಿಂದ ಜಟ್ಕಾ ಸ್ಟ್ಯಾಂಡ್ ವರೆಗೆ ತಿರಂಗಾ ಯಾತ್ರೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಪಿಪಿಸಿ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಸುಕುನ್ಯಾ ಮೇರಿ ಅವರು, ನಾವು ಕಲಿತ ವಿದ್ಯೆ ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ ಅದು ರಾಷ್ಟ್ರ ರಕ್ಷಣೆಗೆ ಉಪಯೋಗವಾಗಬೇಕು. ದೇಶಕ್ಕೆ ಸಂಕಷ್ಟ ಎದುರಾದಾಗ ಎಲ್ಲ ಭಾರತೀಯರು ಒಗ್ಗಟ್ಟಾಗಿ ದೇಶದ ಹಿತ ಕಾಯುವ ಕೆಲಸ ಮಾಡಬೇಕು. ರಾಷ್ಟ್ರ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.
ನಿವೃತ್ತ ಯೋಧ ಸುರೇಶ್ ಬಾರಕೂರು, ಉಡುಪಿ ಶೋಕಾ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ಫಾ.ಪ್ರವೀಣ್ ಡಿಸೋಜ, ಕರ್ನಲ್ ಎಫ್‌ಎ ರೋಡ್ರಿಗಸ್, ನಿವೃತ್ತ ಯೋಧರ ಸಂಘದ ಅಧ್ಯಕ್ಷ ಕೇಶವ ಮಲ್ಪೆ ಮಾತನಾಡಿದರು.
ಜಾಥದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದಯ ಕುಮಾರ್ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.












