ಉಡುಪಿ: ಇಲ್ಲಿನ ಚಂದುಮೈದಾನದ ಬಳಿಯ ಜನವಸತಿ ಪರಿಸರದ ರಸ್ತೆಗಳಲ್ಲಿ ರಾತ್ರಿಯ ಸಮಯ ಮುಳ್ಳು ಹಂದಿಗಳು ಸಂಚರಿಸುತ್ತಿದ್ದು, ಇದರಿಂದ ರಾತ್ರಿಯ ಸಮಯದಲ್ಲಿ ಸಾರ್ವಜನಿಕರು ರಸ್ತೆಗಳಲ್ಲಿ ಸಂಚರಿಸಲು ಆತಂಕ ಪಡುವಂತಾಗಿದೆ.
ಈ ಬಗ್ಗೆ ಪತ್ರಕರ್ತ ಸಂತೋಷ್ ಸರಳಬೆಟ್ಟು ಅವರು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮುಳ್ಳು ಹಂದಿಯ ಸಂಚರಿಸುವುದು ಕಂಡುಬಂದಿದೆ. ಸಂಚಾರ ಸ್ಥಳ ಗುರುತಿಸಿ, ಅರಣ್ಯ ಇಲಾಖೆ ಮತ್ತು ನಾಗರಿಕ ಸಮಿತಿಯ ಕಾರ್ಯಕರ್ತರು ಮುಳ್ಳು ಹಂದಿಯ ವಶಕ್ಕೆ ಪಡೆಯಲು, ಬೆಳಕಿನ ವ್ಯವಸ್ಥೆಯೊಂದಿಗೆ ಕಾರ್ಯಾಚರಣೆ ನಡೆಸಿದರು.
ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಸುರೇಶ್ ಜಿ, ಅರಣ್ಯರಕ್ಷಕ ದೇವರಾಜ್ ಪಾಣ, ಸಿಬ್ಬಂದಿ ಜೋಯ್, ಹಾಗೂ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಭಾಗಿಯಾಗಿದ್ದರು.
ಗಾಢವಾದ ಕತ್ತಲು ಮತ್ತು ಪೊದೆಗಳು ಬೆಳೆದಿರುವುದರಿಂದ ಕಾರ್ಯಾಚರಣೆಗೆ ಅಡಚಣೆ ಎದುರಾಯಿತು. ಮುಳ್ಳು ಹಂದಿ ಪೊದೆಗಳಲ್ಲಿ ಅವಿತುಕೊಂಡು ಕಾರ್ಯಾಚರಣೆಯನ್ನು ವಿಫಲಗೊಳಿಸಿತು. ಕಾಡಿನಲ್ಲಿ ಜೀವಿಸಬೇಕಾಗಿದ್ದ ವನ್ಯಜೀವಿಗಳು, ಆಹಾರದ ಕೊರತೆಯಿಂದಾಗಿ ಜನವಸತಿ ಪ್ರದೇಶಗಳಾತ್ತ ಲಗ್ಗೆ ಇಟ್ಟಿವೆ. ಈ ಪ್ರದೇಶದಲ್ಲಿ ಹೆಬ್ಬಾವು, ಮುಳ್ಳು ಹಂದಿಗಳು ಆಗಾಗ ಗೋಚರಿಸುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.