ಬಿಜೆಪಿ ಜಿಲ್ಲಾಧ್ಯಕ್ಷರೇ ಹುದ್ದೆಗೆ ತಕ್ಕಂತೆ ಹೇಳಿಕೆ ನೀಡಿ, ಸುಳ್ಳು ಹೇಳಿ ಘನತೆಗೆ ಚ್ಯುತಿ ತಂದುಕೊಳ್ಳಬೇಡಿ: ಸುರೇಶ್ ನಾಯಕ್ ರಿಂದ ತಿರುಗೇಟು

ಉಡುಪಿ: ಬಿಜೆಪಿ ಜಿಲ್ಲಾಧ್ಯಕ್ಷರೇ ಹುದ್ದೆಗೆ ತಕ್ಕಂತೆ ಹೇಳಿಕೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ನಿಮ್ಮ ಘನತೆಯ ಸ್ಥಾನಕ್ಕೆ ಅಗೌರವ ತಂದುಕೊಳ್ಳಬೇಡಿ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ತೆಂಕನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ನಾಯಕ್ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆ ತಿರುಗೇಟು ನೀಡಿದ್ದಾರೆ.

ಸುರೇಶ್ ನಾಯಕ್ ಗುರುವಾರ ತೆಂಕನಿಡಿಯೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾಧ್ಯಕ್ಷರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ‘ಸುರೇಶ್ ನಾಯಕ್ ಅವರನ್ನು ಬಿಜೆಪಿಯಿಂದ ಹಿಂದೆಯೇ ಅಮಾನತು ಮಾಡಲಾಗಿದೆ’ ಎಂದು ಹೇಳಿದ್ದರು.

 

ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಗೆ ಸ್ಪಷ್ಟನೆ ನೀಡಿದ ಸುರೇಶ್ ನಾಯಕ್, ನಾನು 5 ವರ್ಷಗಳ ಹಿಂದೆ 32ನೇ ತೆಂಕನಿಡಿಯೂರು ಗ್ರಾಮದ ಕೆಳಾರ್ಕಳಬೆಟ್ಟು 1 ನೇ ವಾರ್ಡಿನ ಬಿಜೆಪಿಯ ಬೆಂಬಲಿತನಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆದರೆ ನಾನು ಗ್ರಾಮದ ಜನರು ಹಾಗೂ ಕಾರ್ಯಕರ್ತರ ಸಹಾಯದಿಂದ ಚುನಾಯಿತನಾಗಿರುತ್ತೇನೆ ಹೊರತು ಯಾವುದೇ ಪಕ್ಷದ ಚಿಹ್ನೆಯ ಅಡಿಯಲ್ಲಿ ಚುನಾಯಿತನಾಗಿಲ್ಲ. ಇದು ತಮಗೆ ತಿಳಿದಿರಲಿ ಎಂದು ಕುಯಿಲಾಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಂಚಾಯತ್ ದುರಾಡಳಿತದಿಂದ ಸರಿಯಾದ ಮೂಲಸೌಕರ್ಯಗಳು, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರಲಿಲ್ಲ. ಈ ಕಾರಣದಿಂದ ಎರಡೂವರೆ ವರ್ಷಕ್ಕೆ ನಡೆದ ಅಧ್ಯಕ್ಷರ ಬದಲಾವಣೆಯ ಸಂದರ್ಭದಲ್ಲಿ ನಾನು ಮತ್ತು ಕೆಲವರು ಅಡ್ಡ ಮತದಾನ ಮಾಡಿದ್ದೇವು. ಈ ವಿಷಯವನ್ನು ನಾನು ಜಿಲ್ಲಾ ಕಚೇರಿಯಲ್ಲಿ ಮುಕ್ತವಾಗಿ ತಿಳಿಸಿದ್ದೇನೆ. ನೀವು ನೀಡಿದ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನೀವು ವಿಷಯ ತಿಳಿದು ಹೇಳಿಕೆ ನೀಡುವುದು ಸೂಕ್ತ ಎಂದು ಹರಿಹಾಯ್ದಿದ್ದಾರೆ.