ಉಡುಪಿ: ಕೆಜಿಎಫ್-2 ಯಶಸ್ವಿ ಪ್ರದರ್ಶನದಿಂದ ಚಿತ್ರಮಂದಿರ ಚೇತರಿಕೆ

ಉಡುಪಿ: ಕೋವಿಡ್ ನಿಂದಾಗಿ ಎರಡು ವರ್ಷ ಸಾಕಷ್ಟು ನಷ್ಟಕ್ಕೆ ಸಿಲುಕಿದ್ದ ಚಿತ್ರಮಂದಿರಗಳು, ಕೆಜಿಎಫ್-2 ಸಿನಿಮಾದ ಯಶಸ್ವಿ ಪ್ರದರ್ಶನದಿಂದ ಮರುಚೇತರಿಕೆ ಕಂಡಿದೆ ಎಂದು ಅಲಂಕಾರ್ ಚಿತ್ರಮಂದಿರದ ವ್ಯವಸ್ಥಾಪಕ ಜಗದೀಶ್ ಕುಡ್ವ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಲ್ಟಿಫ್ಲೆಕ್ಸ್ ಅಬ್ಬರದ ನಡುವೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟಕ್ಕೆ ಸಿಲುಕಿದ್ದವು.‌ ಆದಾದ ಬಳಿಕ ಕೋವಿಡ್ ಲಾಕ್‌ಡೌನ್ ನಿಂದ ಚಿತ್ರಮಂದಿರದ ವ್ಯವಹಾರಕ್ಕೆ ಸಾಕಷ್ಟು ಹೊಡೆತ ಬಿದ್ದಿತ್ತು.

ಕೋವಿಡ್‌ ಲಾಕ್‌ಡೌನ್ ಮುಗಿದ ಬಳಿಕ ಚಿತ್ರಮಂದಿರಗಳು ತೆರೆದರೂ ಜನರು ಮಾತ್ರ ಚಿತ್ರಮಂದಿರದತ್ತ ಬರುತ್ತಿರಲಿಲ್ಲ. ಇದರ ಪರಿಣಾಮ ಬಿಡುಗಡೆಗೊಂಡ ಸಾಕಷ್ಟು ಸಿನಿಮಗಳು ಹೆಚ್ಚು ದಿನ ಓಡುತ್ತಿರಲಿಲ್ಲ.

ಇದೀಗ ಎರಡು ವರ್ಷಗಳ ನಂತರ ಕೆಜಿಎಫ್ 2 ಚಿತ್ರ ಉಡುಪಿಯಲ್ಲಿ 5ನೇ ವಾರ ಪೂರೈಸಿ 6ನೇ ವಾರದತ್ತ ಮುನ್ನುಗುತ್ತಿದೆ. ಇದರಿಂದ ಚಿತ್ರಮಂದಿರವೂ ಚೇತರಿಕೆ ಕಂಡಿದೆ ಎಂದರು.

ಪುನಿತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಸಿನೆಮಾ ಹೆಚ್ಚು ದಿನ ಪ್ರದರ್ಶನ ಕಂಡಿತ್ತು. ಆದರೆ, ಕೋವಿಡ್ ಬಳಿಕ ಉಡುಪಿಯಲ್ಲಿ ಗಳಿಕೆ ಹಾಗೂ ಹೆಚ್ಚು ದಿನ ಪ್ರದರ್ಶನ ಕಂಡ ಮೊದಲ ಕನ್ನಡ ಚಿತ್ರ ಕೆಜಿಎಫ್-2 ಆಗಿದೆ ಎಂದು ಅವರು ಹೇಳಿದ್ದಾರೆ.