ಉಡುಪಿ: ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳ್ಳಲಿದೆ ವೀಕೆಂಡ್ ಕರ್ಫ್ಯೂ; ಜನರ ಅನಗತ್ಯ ಓಡಾಟಕ್ಕೆ ಸಂಪೂರ್ಣ ಬ್ರೇಕ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಡುವ ಪಾಸಿಟಿವಿಟಿ ದರವನ್ನು ಸೊನ್ನೆಗೆ ಇಳಿಸುವ ಉದ್ದೇಶದಿಂದ ಜಿಲ್ಲಾಡಳಿತ ವೀಕೆಂಡ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದೆ.

ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಜೂನ್ 25ರ ಶುಕ್ರವಾರ ಸಂಜೆ 7 ಗಂಟೆಯಿಂದ ಜೂ. 28ರ ಸೋಮವಾರ ಬೆಳಿಗ್ಗೆ 5ಗಂಟೆಯವರೆಗೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಜಿಲ್ಲಾಧಿಕಾರಿ‌ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಈ ಕೆಳಕಂಡ ಅಗತ್ಯ ಚಟುವಟಿಕೆಗಳಿಗೆ ಅವಕಾಶ:
ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಇತ್ಯಾದಿ, ತುರ್ತು, ಅಗತ್ಯ ಸೇವೆಗಳು ಮತ್ತು COVID-19 ಕಂಟೈನ್ಮೆಂಟ್ ಮತ್ತು ಮ್ಯಾನೇಜ್ಮೆಂಟ್ ಕರ್ತವ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇಂತಹ ಸಂಸ್ಧೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು / ಸಿಬ್ಬಂದಿಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ.
ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24/7 ಕಾರ್ಯಾಚರಣೆಗಳ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳು / ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂತಹ ಸಂಸ್ಥೆಗಳ ನೌಕರರು, ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸಬಹುದಾಗಿರುತ್ತದೆ. ಆದಾಗ್ಯೂ, ಸಾಧ್ಯವಾದಷ್ಟು ಮಟ್ಟಿಗೆ, ನೌಕರರನ್ನು ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು.

ದೂರವಾಣಿ ಹಾಗೂ ಅಂತರ್ಜಾಲ ಸೇವೆಯನ್ನು ಪೂರೈಸುವ ನೌಕರರು ಹಾಗೂ ವಾಹನಗಳನ್ನು ಸಂಬಂಧಿಸಿದ ಸಂಸ್ಧೆಯಿಂದ ಪಡೆದಿರುವ ಸೂಕ್ತ ಗುರುತಿನ ಚೀಟಿಯೊಂದಿಗೆ ಸಂಚಾರಿಸಬಹುದಾಗಿದೆ. ಮಾಹಿತಿ ತಂತ್ರಜ್ಜಾನ ಮತ್ತು ಮಾಹಿತಿ ತಂತ್ರಜ್ಜಾನ ಆಧಾರಿತ ಕಂಪನಿ / ಸಂಸ್ದೆ ( IT and ITeS companies /organization) ಗಳಲ್ಲಿ ಕಾರ್ಯ ನಿರ್ವಹಿಸುವ ಅವಶ್ಯಕ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ಕಾರ್ಯನಿರ್ವಹಿಸುವುದು. ಅವರನ್ನು ಹೊರತು ಪಡಿಸಿ ಇತರೆ ಸಿಬ್ಬಂದಿ ಹಾಗೂ ಕೆಲಸಗಾರರು ಮನೆಗಳಲ್ಲಿಯೇ ಕೆಲಸ ನಿರ್ವಹಿಸುವುದು (work from home).

ರೋಗಿಗಳು ಮತ್ತು ಅವರ ಪರಿಚಾರಕರು / ತುರ್ತು ಅಗತ್ಯವಿರುವ ವ್ಯಕ್ತಿಗಳು, ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಉದ್ದೇಶಿಸಿರುವ ಅರ್ಹರು ಕನಿಷ್ಠ ದಾಖಲೆಗಳೊಂದಿಗೆ ಸಂಚರಿಸಲು ಅನುಮತಿಸಿದೆ.
ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಕೇಂದ್ರಗಳು, ಮತ್ತು ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 6.00 ರಿಂದ ಅಪರಾಹ್ನ 2.00 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.

ಬೀದಿಬದಿ ವ್ಯಾಪಾರಸ್ಥರು ಬೆಳಿಗ್ಗೆ 6.00 ರಿಂದ ಅಪರಾಹ್ನ 2.00 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಆದರೆ ಯಾವುದೇ ತಯಾರಿಸಲಾದ ಆಹಾರ, ಪಾನಿಪುರಿ, ಚಾಟ್ಸ್‌ ಮುಂತಾದವುಗಳ ಮಾರಾಟಕ್ಕೆ ಅವಕಾಶವಿಲ್ಲ.
ಸಾರ್ವಜನಿಕ ವಿತರಣಾ ವ್ಯವಸ್ಥೆ(PDS)ಯ ಅಂಗಡಿಗಳಿಗೆ ಅವಕಾಶವಿದೆ ಬೆಳಿಗ್ಗೆ 6.00 ರಿಂದ ಅಪರಾಹ್ನ 2.00 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.. ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲಿ ಬೆಳಿಗ್ಗೆ 6.00 ರಿಂದ ಮಧ್ಯಾಹ್ನ 2.00 ರವರೆಗೆ ಪಾರ್ಸೆಲ್‌ ಕೊಂಡುಹೋಗಲು ಮಾತ್ರ ಅನುಮತಿಸಲಾಗಿದೆ.. ಜನರು ಮನೆಯಿಂದ ಹೊರಕ್ಕೆ ಸಂಚರಿಸುವುದನ್ನು ಕಡಿಮೆ ಮಾಡಲು COVID 19 ನಿರ್ವಹಣೆಗಾಗಿರುವ ರಾಷ್ಟ್ರೀಯ ನಿರ್ದೇಶನಗಳಿಗೆ ಬದ್ಧರಾಗಿ 24×7ಹೋಮ್‌ ಡೆಲಿವರಿ ಸೇವೆಗಳನ್ನು ನೀಡಲು ಪ್ರೋತ್ಸಾಹಿಸುವುದು.
ರೆಸ್ಟೋರೆಂಟ್‌ ಗಳಲ್ಲಿ ಮತ್ತು ತಿನಿಸುಕೇಂದ್ರಗಳಲ್ಲಿ, ಆಹಾರಗಳನ್ನು ತೆಗೆದುಕೊಂಡು ಹೋಗಲು ಮತ್ತು ಹೋಮ್ ಡೆಲಿವರಿಗಳನ್ನು ಮಾತ್ರ ಅನುಮತಿಸಲಾಗಿದೆ.

ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಪ್ರಯಾಣವನ್ನು ಅನುಮತಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ, ರೈಲ್ವೆ ನಿಲ್ದಾಣಕ್ಕೆ , ಬಸ್ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣಗಳಿಂದ, , ರೈಲ್ವೆ ನಿಲ್ದಾಣಗಳಿಂದ , ಬಸ್ ನಿಲ್ದಾಣಗಳಿಂದ ಹೊರಡುವ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟವನ್ನು ಅನುಮತಿಸಿದೆ. ಪ್ರಯಾಣ ಮಾಡುವ ಸಂಧರ್ಭದಲ್ಲಿ ಪ್ರಯಾಣಿಕರು ಸೂಕ್ತ ಪ್ರಯಾಣದ ದಾಖಲೆಗಳು / ಟಿಕೆಟುಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಮತ್ತು ಕೋವಿಡ್‌ 19 ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತುಗಳೊಂದಿಗೆ ಸಂಚಾರಕ್ಕೆ ಅನುಮತಿಸಲಾಗಿದೆ.

ಮದುವೆಗಳು: “ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಸರಳವಾಗಿ ಆಯಾ ಮನೆಗಳಲ್ಲಿ ಕುಟುಂಬದ ಸದಸ್ಯರು /ಸಂಬಂಧಿಕರು ಸೇರಿದಂತೆ 40 ಜನರನ್ನು ಒಳಗೊಂಡು ಈ ಕೆಳಗೆ ನಿಗದಿಪಡಿಸಿದ ಷರತ್ತಿಗೊಳಪಟ್ಟು ನಡೆಸಲು ಅನುಮತಿಸಲಾಗಿದೆ.
ವಿವಾಹಗಳನ್ನು ಆಯೋಜಿಸುವವರು ವಿವಾಹ ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಸಲ್ಲಿಸಬೇಕು.
ಅರ್ಜಿಯ ಸ್ವೀಕೃತಿಯ ಮೇರೆಗೆ, ತಹಶೀಲ್ದಾರರು ಪ್ರತಿ ಮದುವೆ ಕಾರ್ಯಕ್ರಮಕ್ಕೆ 40 ಪಾಸ್‌ಗಳನ್ನು ನೀಡಬೇಕು.
ಪಾಸ್ ಹೊಂದಿರುವ ಜನರಿಗೆ ಮಾತ್ರ ಮದುವೆ ಕಾರ್ಯಕ್ಕೆ ಹಾಜರಾಗಲು ಅವಕಾಶವಿರುತ್ತದೆ ಮತ್ತು ಪಾಸ್ ಅನ್ನು ವರ್ಗಾಯಿಸಲು ಅವಕಾಶವಿರುವುದಿಲ್ಲ.

ಮದುವೆ ಕಾರ್ಯಕ್ಕೆ ಹಾಜರಾಗುವ ಜನರು ಕೋವಿಡ್‌ ಸಮುಚಿತ ವರ್ತನೆಯನ್ನು (COVID APPROPRIATE BEHAVIOUR –CAB) ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಅವರ ಪಾಸ್‌ಗಳನ್ನು ಅಧಿಕೃತ ಪರಿಶೀಲನಾ ಅಧಿಕಾರಿಗಳಿಗೆ ತೋರಿಸುವುದು.
ಶವಸಂಸ್ಕಾರ /ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಕೋವಿಡ್‌ ಸಮುಚಿತ ವರ್ತನೆಯನ್ನು(COVID APPROPRIATE BEHAVIOUR –CAB) ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ನಿರ್ವಹಿಸಲು ಅನುಮತಿಸಿದೆ.