ಉಡುಪಿ: ಬ್ಲ್ಯಾಕ್ ಫಂಗಸ್ ಸೋಂಕಿಗೆ ಜಿಲ್ಲೆಯಲ್ಲಿ ಮತ್ತೊಂದು ವ್ಯಕ್ತಿ ಬಲಿಯಾಗಿದ್ದಾರೆ. ಉಡುಪಿ ಸಮೀಪದ ಕಡೆಕಾರಿನ 55 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇವರಿಗೆ ಮೇ 30ರಂದು ಕಪ್ಪು ಶಿಲೀಂದ್ರ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದರೊಂದಿಗೆ ಕಪ್ಪು ಶಿಲೀಂದ್ರಕ್ಕೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ. ಈ ಮೊದಲು ಸಂತೆಕಟ್ಟೆಯ 76ರ ಹರೆಯದ ಮಹಿಳೆಯೊಬ್ಬರು ಅಸುನೀಗಿದ್ದರು.
ಸದ್ಯ ಮಣಿಪಾಲದಲ್ಲಿ ಜಿಲ್ಲೆಯ ಇಬ್ಬರು ಹಾಗೂ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಕುಂದಾಪುರ ನಾಗೂರಿನ 55 ವರ್ಷ ಪ್ರಾಯದ ಮಹಿಳೆ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.