ಉಡುಪಿ: ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಗ್ರಾಮೀಣ ಭಾಗದಲ್ಲಿ ವಾರಕ್ಕೆ 2 ಎರಡು ದಿನ ನೀರು ಪೂರೈಕೆಯೂ ಕಷ್ಟವಾಗುತ್ತಿದೆ. ನಗರ ಪ್ರದೇಶದ ಪರಿಸ್ಥಿತಿಯೂ ಭಿನ್ನವಾಗಿಲ್ಲ.
ಜಿಲ್ಲೆಯ 155 ಗ್ರಾ.ಪಂ.ಗಳಲ್ಲಿ 46 ಗ್ರಾ.ಪಂಗಳು ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿವೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅನುದಾನದ ಕೊರತೆಯಿಂದ ಕೆಲವು ಗ್ರಾ.ಪಂ.ಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಯೂ ಕಷ್ಟವಾಗುತ್ತಿದೆ.
ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸರಕಾರದಿಂದ ಅನುದಾನ ಬರುತ್ತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳ ಘೋಷಣೆಯೂ ಆಗಿಲ್ಲ. ಹೀಗಾಗಿ ಗ್ರಾ.ಪಂ.ಗಳು ತಮ್ಮ ಸ್ವಂತ ನಿಧಿಯಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ 31 ಬೋರ್ವೆಲ್ಗಳನ್ನು ಕೊರೆಯಲಾಗಿದೆ. ಅದರಲ್ಲಿ 28 ಫಲ ನೀಡಿದ್ದು, 3ರಲ್ಲಿ ನೀರು ಸಿಕ್ಕಿಲ್ಲ. ಈಗ ಹೊಸದಾಗಿ 148 ಬೋರ್ವೆಲ್ ಕೊರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಅನುಮತಿ ಸಿಕ್ಕಿಲ್ಲ.
ಮೇ ಮೊದಲ ವಾರದೊಳಗೆ ಮಳೆ ಬಾರದೇ ಇದ್ದರೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಉಡುಪಿ ನಗರದಲ್ಲೂ ನೀರಿನ ಸಮಸ್ಯೆ ದಿನೇದಿನೆ ಹೆಚ್ಚುತ್ತಿದೆ. ಎರಡು-ಮೂರು ದಿನಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. ಸ್ವರ್ಣಾ ನದಿಯ ಒಡಲು ಬರಿದಾಗುತ್ತಿದೆ. ಬಿಸಿಲಿನ ತಾಪವೂ ಹೆಚ್ಚಿರುವುದರಿಂದ ಅಣೆಕಟ್ಟು ಪ್ರದೇಶದಲ್ಲಿ ಶೇಖರಿಸಿರುವ ನೀರು ಹೆಚ್ಚಿನ ಪ್ರಮಾಣದಲ್ಲಿ ಆವೆಯಾಗುತ್ತಿವೆ. ಜಿಲ್ಲೆಯ ಕುಂದಾಪುರ, ಕಾರ್ಕಳ, ಬೈಂದೂರು ಹಾಗೂ ಕಾಪು ಭಾಗದಲ್ಲಿ ಸಮಸ್ಯೆ ಹೆಚ್ಚಿದೆ. ಎಲ್ಲದಕ್ಕೂ ಮಳೆಯೇ ಪರಿಹಾರ ಎಂಬಂತಾಗಿದೆ.